ಮಾಡಿದ ತಪ್ಪನ್ನೇ ಮಾಡುತ್ತಿರುವ ಪ್ರಯಾಣಿಕರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ
ಮಂಗಳೂರು, ಜನವರಿ 15: ಗುದದ್ವಾರದಲ್ಲಿ ಹಾಗೂ ಚಾಕಲೇಟ್‌ನಲ್ಲಿ ಮರೆ ಮಾಡಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಮಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 50 ಲಕ್ಷ ರೂ ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜನವರಿ 12ರಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳಾದ IX816 ಮತ್ತು IX814 ಮೂಲಕ ಅಬುಧಾಬಿ ಮತ್ತು ದುಬೈನಿಂದ ಆಗಮಿಸಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಬ್ಬರು ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು.

ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದಾಗ ಗುದನಾಳದಲ್ಲಿ ಅಂಡಕಾರದ ವಸ್ತುವಿನೊಂದಿಗೆ ಮತ್ತು ಬ್ಯಾಗ್‌ನಲ್ಲಿ ಚಾಕಲೇಟ್ ನೊಂದಿಗೆ ಮರೆಮಾಡಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಪ್ರಯಾಣಿಕರಿಬ್ಬರ ಬಳಿಯಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ ಒಟ್ಟು 815 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ 50,93,750 ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಇಬ್ಬರೂ ಪ್ರಯಾಣಿಕರನ್ನು ಮಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಇತ್ತೀಚೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 98 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಮಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿತ್ತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ: ಆರೋಪಿ ಅರೆಸ್ಟ್
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುದದ್ವಾರದಲ್ಲಿ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಅಕ್ರಮವಾಗಿ ಸಾಗಿಸಲಾಗುತ್ತಿದ್ದ 98.68 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಆರೋಪಿ ದುಬೈನಿಂದ ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಚಿನ್ನದ ಪೇಸ್ಟ್‌ನ್ನು ಕ್ಯಾಪ್ಸೂಲ್‌ಗಳಲ್ಲಿ ತುಂಬಿಸಿಟ್ಟು ಗುದದ್ವಾರದಲ್ಲಿ ಅಡಗಿಸಿ ಸಾಗಾಟ ಮಾಡಲು ಯತ್ನಿಸಿದ್ದಾನೆ. ದುಬೈನಿಂದ ಬಂದ ಪ್ರಯಾಣಿಕನ ವರ್ತನೆಯ ಮೇಲೆ ಅನುಮಾನಗೊಂಡಿದ್ದ ಕಸ್ಟಮ್ಸ್ ಅಧಿಕಾರಿಗಳು ಪ್ರಯಣಿಕನನ್ನು ವಶಕ್ಕೆ ಪಡೆದು ಶೋಧ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಬಯಲಾಗಿತ್ತು. ಕೂಡಲೇ ಆತನನ್ನು ಬಂಧಿಸಿದ ಅಧಿಕಾರಿಗಳು ಸುಮಾರು ಒಂದು ಕೋಟಿಗೆ ಹತ್ತಿರವಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದರು.












Click it and Unblock the Notifications