ಮದುವಣಗಿತ್ತಿಯಂತೆ ಸಿಂಗಾರಗೊಂಡ ದಕ್ಷಿಣ ಕನ್ನಡದ ಮತಗಟ್ಟೆಗಳು
ಮಂಗಳೂರು ಮೇ 11: ರಾಜ್ಯ ವಿಧಾನ ಸಭಾ ಚನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಾಳೆ ಅಂದರೆ ಶನಿವಾರ ನಿರ್ಧರಿಸಲಿದ್ದಾರೆ. ಈ ಚುನಾವಣಾ ಹಬ್ಬಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
ಐದು ವರ್ಷಕ್ಕೊಮ್ಮೆ ಬರುವ ಈ ಚುನಾವಣೆಯನ್ನು ವಿಧಾನಸಭೆ ಚುನಾವಣೆಯ ಮದಾನ ಹಬ್ಬವಾಗಿ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ್ಮಾನಿಸಿದೆ. ಪ್ರಮುಖ ಚುನಾವಣಾ ಕಚೇರಿಯಾಗಿರುವ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯನ್ನು ಕಳೆದ ರಾತ್ರಿಯಿಂದಲೇ ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ.

ತುಳು ಸಂಸ್ಕೃತಿ ಲೇಪ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗದ ಮತಗಟ್ಟೆಗಳಿಗೆ ತುಳು ಸಂಸ್ಕೃತಿಯ ಲೇಪ ನೀಡಲಾಗಿದೆ . ಬೆಳ್ತಂಗಡಿಯ ತಾಲೂಕಿನಲ್ಲಿ ಚುನಾವಣಾ ಆಯೋಗ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಸ್ವಾಗತ ದ್ವಾರ ನಿರ್ಮಿಸಿದೆ. ಇದಲ್ಲದೇ ಕೆಲ ಮತ ಕೇಂದ್ರಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಆಕರ್ಷಕಗೊಳಿಸಲಾಗಿದೆ.

ಸಂಪೂರ್ಣ ಸಜ್ಜು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ನಡೆಯಲಿರುವ ಮಹಾ ಮತದಾನ ಉತ್ಸವಕ್ಕೆ ಜಿಲ್ಲಾಡಳಿತ ಸಿದ್ದತೆ ಪೂರ್ಣಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 1858 ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಚುನಾವಣಾ ಸಿದ್ದತೆಗಳನ್ನು ಪೂರ್ಣಗೊಳಿಸಿದ್ದು ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ.
ಜಿಲ್ಲೆಯಲ್ಲಿ ಒಟ್ಟು 17,11,878 ಮತದಾರರಿದ್ದಾರೆ. ಅವರಲ್ಲಿ 8,41,073 ಪುರುಷ ಹಾಗೂ 8,70,675 ಮಹಿಳಾ ಮತದಾರರಾಗಿದ್ದಾರೆ. ಇದಲ್ಲದೇ ಜಿಲ್ಲೆಯಲ್ಲಿ ಈ ಬಾರಿ 100 ಮಂದಿ ಲೈಂಗಿಕ ಅಲ್ಪ ಸಂಖ್ಯಾತರೂ ಶನಿವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

1858 ಮತಗಟ್ಟೆಗಳು
ಜಿಲ್ಲೆಯ 1858 ಮತಗಟ್ಟೆಗಳಿಗೆ 7569 ಮತಯಂತ್ರ ಒದಗಿಸಲಾಗಿದ್ದು ಇವುಗಳ ಪೈಕಿ ಶೇಕಡಾ 20ರಷ್ಟು ಮತಯಂತ್ರಗಳು ಮೀಸಲಿರಲಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾಹಿತಿ ನೀಡಿದ್ದಾರೆ. ಶನಿವಾರ ನಡೆಯುವ ಚುನಾವಣಾ ಕರ್ತವ್ಯಕ್ಕೆ ಒಟ್ಟು 13176 ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಧಿಕಾರಿ , 4 ಮತಗಟ್ಟೆ ಅಧಿಕಾರಿ ಮತ್ತು ಒಬ್ಬ ಡಿ-ವರ್ಗ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

517 ಸೂಕ್ಷ್ಮ ಮತಗಟ್ಟೆಗಳು
ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ತಲುಪಿಸಲು ಹಾಗು ಚುನಾವಣೆ ಮುಕ್ತಾಯಗೊಂಡ ಬಳಿಕ ಡಿ ಮಸ್ಟರಿಂಗ್ ಕೇಂದ್ರಗಳಿಗೆ ಕರೆತರಲು ಒಟ್ಟು 648 ವಾಹನಗಳನ್ನು ವ್ಯವಸ್ತೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1858 ಮತಗಟ್ಟೆಗಳ ಪೈಕಿ 517 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಪೈಕಿ 97 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 221 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರನ್ನು ಚುನಾವಣಾ ಆಯೋಗ ನಿಯೋಜಿಸಿದೆ.












Click it and Unblock the Notifications