ಕೋಳಿ ಅಂಕಕ್ಕೆ ಜೂಜು ನೆಪ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಕಾಳಗಕ್ಕೆ ಫುಲ್ ಸ್ಟಾಪ್
ಮಂಗಳೂರು, ಫೆಬ್ರವರಿ 13: ರಾಜ್ಯದೆಲ್ಲೆಡೆ ನಡೆಯುವ ಎಲ್ಲಾ ವಿಧದ ಕೋಳಿ ಅಂಕಗಳಿಗೆ ನಿಷೇಧ ಹೇರುವ ಆದೇಶವನ್ನು ಪೋಲೀಸ್ ಇಲಾಖೆ ಹೊರಡಿಸಿದೆ. ಈ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೆಲವೊಂದು ಸಾಂಪ್ರದಾಯಿಕ ಕೋಳಿ ಅಂಕಗಳಿಗೂ ಈ ಆದೇಶ ಅನ್ವಯಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಈ ಸಂಬಂಧ ಕೋಳಿ ಅಂಕ ಆಯೋಜಕರಿಗೆ ಖಡಕ್ ಆದೇಶ ನೀಡಿದ್ದಾರೆ.
ಈ ಆದೇಶದ ಹಿನ್ನಲೆಯಲ್ಲಿ ಪೋಲೀಸರು ಎಲ್ಲಾ ಕಡೆಗಳಲ್ಲಿ ನಡೆಯುವ ಕೋಳಿ ಅಂಕಗಳಿಗೆ ದಾಳಿ ನಡೆಸಲು ಆರಂಭಿಸಿದ್ದಾರೆ. ಅಲ್ಲದೆ ಕೋಳಿ ಅಂಕಕ್ಕೆ ಅನುಮತಿಗಾಗಿ ಯಾರೂ ಪೋಲೀಸ್ ಠಾಣೆಗೆ ಬರುವಂತಿಲ್ಲ ಎನ್ನುವ ಸೂಚನೆಯನ್ನೂ ನೀಡಿದ್ದಾರೆ. ಈ ಸೂಚನೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಜೂಜು ಆಧಾರಿತ ಕೋಳಿ ಅಂಕಗಳಿಗೆ ಹೊಡೆತ ಬೀಳುವ ಜೊತೆಗೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಕೋಳಿ ಅಂಕಕ್ಕೂ ಸಮಸ್ಯೆಯಾಗಿದೆ.

ಹದಿಹರೆಯದ ಯುವಕರನ್ನೇ ಈ ಕೋಳಿ ಅಂಕಗಳು ಇತ್ತೀಚಿನ ದಿನಗಳಲ್ಲಿ ಆಕರ್ಷಿಸುತ್ತಿದ್ದು, ಇದರಿಂದಾಗಿ ಯುವಕರ ಭವಿಷ್ಯದ ಜೊತೆ ಕುಟುಂಬದ ಬದುಕೂ ದುಸ್ತರವಾಗುವ ಸ್ಥಿತಿ ತಲುಪಿದೆ. ಲಕ್ಷಾಂತರ ರೂಪಾಯಿ ವಹಿವಾಟಿನಲ್ಲಿ ನಡೆಯುವ ಈ ಕೋಳಿ ಅಂಕದ ಜೂಜಿನಿಂದಾಗಿ ಹೆಚ್ಚಿನ ಮಂದಿ ಇದರತ್ತ ಆಕರ್ಷಿತರಾಗುತ್ತಿದ್ದಾರೆ.
ಕರಾವಳಿಯಲ್ಲಿ ಹಿಂದಿನ ಕಾಲದಿಂದಲೂ ಕೋಳಿ ಅಂಕವನ್ನು ಸಾಂಪ್ರದಾಯಿವಾಗಿ ನಡೆಸಿಕೊಂಡು ಬರಲಾಗುತ್ತಿದೆ. ತುಳುನಾಡಿನ ಕೆಲವೊಂದು ದೇವಸ್ಥಾನ ಮತ್ತು ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ನಡೆದ ಬಳಿಕ ನೇಮೋತ್ಸವ ನಡೆದ ಜಾಗಕ್ಕೆ ರಕ್ತದ ಬಿಂದು ಆರ್ಪಿಸುವ ಕ್ರಮವಿದ್ದ ಕಾರಣ, ಕೋಳಿಗಳ ಕಾಲಿಗೆ ಸಣ್ಣ ಹರಿತವಾದ ಕತ್ತಿಯನ್ನು ಕಟ್ಟಿ ಎರಡು ಕೋಳಿಗಳನ್ನು ಪರಸ್ಪರ ಕಾದಾಡಿಸಲಾಗುತ್ತದೆ. ಹೀಗೆ ಕಾದಾಡಿದ ಕೋಳಿಗಳ ದೇಹದಿಂದ ಬೀಳುವ ರಕ್ತವನ್ನು ಬೀಳಿಸಲಾಗುತ್ತದೆ.
ಈ ಕ್ರಮದಲ್ಲಿ ಯಾವುದೇ ಜೂಜಿಗೆ ಅವಕಾಶವಿಲ್ಲದಿದ್ದರೂ, ಇತ್ತೀಚಿನ ದಿನಗಳಲ್ಲಿ ಮಾತ್ರ ಸಂಪ್ರದಾಯಿಕ ಕೋಳಿ ಅಂಕವನ್ನೂ ಜೂಜು ಆವರಿಸಿದೆ. ಇದರಿಂದಾಗಿ ಸಾಂಪ್ರದಾಯಿಕ ಕೋಳಿ ಅಂಕವನ್ನೂ ಇಂದು ಜೂಜಿನ ಮೂಲಕವೇ ಅಳೆಯುವ ಸ್ಥಿತಿ ನಿರ್ಮಾಣವಾಗಿದೆ. ಜೂಜಿನ ಕಾರಣಕ್ಕಾಗಿ ಸಂಪ್ರದಾಯಿಕ ಕೋಳಿ ಅಂಕಕ್ಕೂ ಸಮಸ್ಯೆಯಾಗಿರುವುದು ಮಾತ್ರ ವಿಪರ್ಯಾಸವಾಗಿದೆ.
ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕದ ವಿರುದ್ದ ಕಾನೂನಿನ ಅಸ್ತ್ರ ಪ್ರಯೋಗಿಸಿದ ಸರ್ಕಾರದ ಕೋಳಿ ಅಂಕ ನಿರ್ಬಂಧದ ವಿರುದ್ಧ ಕರಾವಳಿ ಬಿಜೆಪಿ ಶಾಸಕರು ತಿರುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸಾಂಪ್ರದಾಯಿಕ ಕೋಳಿ ಅಂಕ ನಿರ್ಬಂಧದ ವಿರುದ್ಧ ಚರ್ಚೆ ನಡೆಯುತ್ತಿದೆ. ಕೋಳಿ ಅಂಕ ನಿರ್ಬಂಧಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಅಂತ ಪೋಸ್ಟ್ ಹಾಕಲಾಗಿದೆ.
ಜೂಜು ಮತ್ತು ಪ್ರಾಣಿ ಹಿಂಸೆ ಹೆಸರಲ್ಲಿ ಸರ್ಕಾರದಿಂದ ಕೋಳಿ ಅಂಕಕ್ಕೆ ಕಡಿವಾಣ ಹಾಕಲು ಡಿಜಿಪಿಯಿಂದ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಅಧಿಕೃತ ಆದೇಶ ಕಳುಹಿಸಲಾಗಿದ್ದು, Prevention of Cruelty to Animal Act ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ.
'ರಾಜ್ಯದಲ್ಲಿ ಕೋಳಿ ಅಂಕಗಳು ಹಗಲಿರುಳು ಎನ್ನದೇ ನಡೆಯುತ್ತಿದೆ 'Prevention of Cruelty to Animal Act 1960ರ ಕಲಂ 11 ಪ್ರಕಾರ ಅಪರಾಧವಾಗಿದೆ''ಹೀಗಾಗಿ ಈ ಕಾಯಿದೆ ಕಡ್ಡಾಯವಾಗಿ ಪಾಲಿಸುವಂತೆ ಮತ್ತು ಅನುಷ್ಠಾನಕ್ಕೆ ತರಬೇಕೆಂದು ಆದೇಶ ಹೊರಡಿಸಲಾಗಿದೆ. ಡಿಜಿಪಿ ಆದೇಶದ ಬೆನ್ನಲ್ಲೇ ದ.ಕ ಜಿಲ್ಲೆಯ ಹಲವಡೆ ಕೋಳಿ ಅಂಕಗಳಿಗೆ ದಾಳಿ ನಡೆಸಿದ್ದಾರೆ. ಜಾತ್ರೆ, ದೈವ ನೇಮೋತ್ಸವದ ಸಾಂಪ್ರದಾಯಿಕ ಕೋಳಿ ಅಂಕಗಳಿಗೂ ಪೊಲೀಸ್ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ.












Click it and Unblock the Notifications