ನಾಗಮಂಗಲ ಗಲಭೆ ಸತ್ಯಶೋಧನೆಗೆ ಐವರನ್ನು ಇಳಿಸಿದ ಬಿಜೆಪಿ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ಮೆರವಣಿಗೆ ವೇಳೆ ನಡೆದ ದಾಳಿಯು ಇದೀಗ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಸಿದೆ. ಅಲ್ಲದೆ ಈ ಗಲಭೆಯು ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ಕಿತ್ತಾಟಕ್ಕೂ ಕಾರಣವಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯು ಘಟನೆಯ ಕುರಿತು ಸತ್ಯಾಸತ್ಯತೆ ತಿಳಿಯಲು ಸತ್ಯಶೋಧನಾ ತಂಡವನ್ನು ರಚಿಸಿ, ಸಮಗ್ರ ವರದಿ ನೀಡಲು ನಿರ್ದೇಶಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸತ್ಯಶೋಧನಾ ತಂಡ ರಚಿಸಿ ಆದೇಶಿಸಿದ್ದು, ಇದರಲ್ಲಿ ಬಿಜೆಪಿ ನಾಯಕರಾದ ಸಿ.ಎನ್.ಅಶ್ವತ್ಥ್ ನಾರಾಯಣ್, ಬೈರತಿ ಬಸವರಾಜ್, ಕೆ.ಸಿ.ನಾರಾಯಣಗೌಡ, ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇದ್ದಾರೆ.

ಸಕ್ಕರೆ ನಾಡು ಮಂಡ್ಯದಲ್ಲಿ ಮೊನ್ನೆ (ಬುಧವಾರ) ರಾತ್ರಿ ಗಣೇಶ ಮೂರ್ತಿಯ ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿತ್ತು. ಮಂಡ್ಯ ಜಿಲ್ಲೆಯ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ಈ ಘಟನೆ ನಡೆದಿತ್ತು. ಗಣೇಶ ವಿಸರ್ಜನೆಯ ಅಂಗವಾಗಿ ಮೂರ್ತಿಯನ್ನು ಮೆರವಣಿಗೆಗೆ ತಂದಿದ್ದ ವೇಳೆ ಇಲ್ಲಿನ ದರ್ಗಾ ಬಳಿ ಏಕಾಏಕಿ ಕಲ್ಲು ತೂರಾಟ ನಡೆದಿತ್ತು.
ಮೆರವಣಿಗೆ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಕೆಲವರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಪೆಟ್ರೋಲ್ ಬಾಂಬ್ ಎಸೆದು ಸಿಕ್ಕ ಸಿಕ್ಕಲ್ಲಿ ಬೆಂಕಿ ಕೂಡ ಹಚ್ಚಿದ್ದರು. ಅಲ್ಲಿದ್ದ ಕೆಲ ವಾಹನಗಳಿಗೂ ಕೂಡ ಬೆಂಕಿ ಹಚ್ಚಿದ್ದು, ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು.
ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಕೈಯಲ್ಲಿ ಕತ್ತಿ, ತಲ್ವಾರ್ ಕೂಡ ಹಿಡಿದು ಬಂದಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದರು. ಬಳಿಕ ಲಾಠಿ ಚಾರ್ಜ್ ಮೂಲಕ ದುಷ್ಕರ್ಮಿಗಳನ್ನು ಅಲ್ಲಿಂದ ಚದುರಿಸಿ, ಅವರು ತಂದಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಇಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.
ಇನ್ನು ಇಲ್ಲಿನ ಮುಸ್ಲಿಂ ಸಮುದಾಯದ ಕೆಲ ಯುವಕರು ಈ ರೀತಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ ಎಂದು ಗಣೇಶೋತ್ಸವದ ಯುವಕರು ಆರೋಪಿಸಿದ್ದು, ಗಣಪತಿ ಮೂರ್ತಿಯನ್ನು ನೇರವಾಗಿ ನಾಗಮಂಗಲ ಪೊಲೀಸ್ ಠಾಣೆಯ ಎದುರು ಕರೆದೊಯ್ದು, ಧಿಕ್ಕಾರ ಕೂಡ ಕೂಗಿದ್ದರು.

ಈ ಘಟನೆಯನ್ನು ಬಿಜೆಪಿ ನಾಯಕರು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡ, ಮಂಡ್ಯದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ಅನ್ಯಕೋಮಿನವರು ಮತ್ತೊಮ್ಮೆ ತಮ್ಮ ದುರ್ಬುದ್ದಿ, ದುಷ್ಟತನ ತೋರಿದ್ದಾರೆ. ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಕಲ್ಲು ತೂರಿರುವುದು ಇವರ ರೋಗಗ್ರಸ್ಥ ಮನಃಸ್ಥಿತಿ ತೋರಿಸುತ್ತದೆ ಎಂದಿದ್ದರು.
ಗಣೇಶನ ಪ್ರಸಾದ ತಯಾರು ಮಾಡಲು ನಿಯಮಾವಳಿ ರೂಪಿಸಿದ ಸರ್ಕಾರ ಯಾರಿಗೂ ತೊಂದರೆ ಕೊಡದೆ ಗಣಪತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರುವವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತದೆ? ಕಲ್ಲು ತೂರಿದ ಪುಂಡರ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಿ ಶಿಕ್ಷಿಸಬೇಕು, ಜೊತೆಗೆ ಕಲ್ಲುತೂರಾಟವನ್ನು ಪ್ರಚೋದಿಸಿದ ಪಟ್ಟಭದ್ರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications