ಜಲಋಷಿ ಕಾಮೇಗೌಡರ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರ ಸಂತಾಪ
ಮಂಡ್ಯ, ಅಕ್ಟೋಬರ್ 17: ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ನೀರಾವರಿಗೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದಿದ್ದ ಮಂಡ್ಯದ ಕಾಮೇಗೌಡರು(84) ಇಂದು ನಿಧನರಾಗಿದ್ದಾರೆ.
ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಮೇಗೌಡರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಕೆರೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಮನತ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಗಳಿಂದ ಮೆಚ್ಚುಗೆ ಪಡೆದಿದ್ದ ಕಾಮೇಗೌಡರು ತಮ್ಮ ಕೊನೆಯ ದಿನಗಳಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಆಸೆ ವ್ಯಕ್ತಪಡಿಸಿದ್ದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದಾಗ ಕಾಮೇಗೌಡರು ಪ್ರಧಾನಿಗಳನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಪ್ರಧಾನಿಗಳ ಬಳಿ ತಮ್ಮ ಕಷ್ಟ ಹೇಳಿಕೊಳ್ಳಬೇಕು ಎಂದಿದ್ದರು. ಆದರೆ ಅವರ ಆಸೆ ಕೊನೆಗೂ ಈಡೇರಲಿಲ್ಲ.
ಆಧುನಿಕ ಭಗೀರಥ ಎನಿಸಿಕೊಂಡಿದ್ದ ಕಾಮೇಗೌಡರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಮೇಗೌಡರ ನಿಧನಕ್ಕೆ ಕಂಬನಿ ಮಿಡಿದ್ದಾರೆ.
|
ಜಲಋಷಿ ಕಾಮೇಗೌಡರ ನಿಧನಕ್ಕೆ ಸಿಎಂ ಸಂತಾಪ
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, " ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು15 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಹ ಕಾಮೇಗೌಡರ ಕಾರ್ಯವನ್ನು ಶ್ಲಾಘಿಸಿದ್ದರು" ಎಂದರು.
|
ಕಾಮೇಗೌಡರ ಪರಿಶ್ರಮ ನೆನೆದ ಸಚಿವ ಸುಧಾಕರ್
ಕಾಮೇಗೌಡರ ಅಗಲಿಕೆಗೆ ಆರೋಗ್ಯ ಸಚಿವ ಸುಧಾಕರ್ ಸಂತಾಪ ಸೂಚಿಸಿದ್ದಾರೆ. "ಮಂಡ್ಯದ ಮಳವಳ್ಳಿಯ ಪ್ರಗತಿಪರ ರೈತರಾದ ಕಾಮೇಗೌಡರು ಇನ್ನಿಲ್ಲವೆಂಬ ಸುದ್ದಿ ತೀವ್ರ ದುಃಖ ತಂದಿದೆ. ತಮ್ಮ ಸ್ವಂತ ಪ್ರಯತ್ನ, ಪರಿಶ್ರಮದಿಂದ ಅನೇಕ ಕೊಳಗಳನ್ನು ನಿರ್ಮಿಸಿದ್ದ ಕಾಮೇಗೌಡರ ಭಗೀರಥ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಇಡೀ ದೇಶಕ್ಕೆ ಪರಿಚಯಿಸಿ ಶ್ಲಾಘಿಸಿದ್ದರು" ಎಂದರು.
ಇನ್ನು 84ರ ಇಳಿವಯಸ್ಸಿನಲ್ಲೂ ಕಾಮೇಗೌಡ ಅವರಿಗಿದ್ದ ಪರಿಸರ ಕಾಳಜಿ ನಮಗೆ ಸದಾ ಮಾದರಿಯಾಗಿದ್ದು, ಜಲಸಂರಕ್ಷಣೆಗೆ ಪ್ರೇರಣೆ ನೀಡಲಿ ಎಂದು ಆಶಿಸುವೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸತ್ತಾ ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಸಚಿವ ಸುಧಾಕರ್ ಸಂತಾಪ ಸೂಚಿಸಿದ್ದಾರೆ.
|
ಕಲ್ಮನೆ ಕಾಮೇಗೌಡರಿಗೆ ಶ್ರದ್ಧಾಂಜಲಿ ಅರ್ಪಿಸಿದ ಜೆಡಿಎಸ್
ರಾಜ್ಯ ಜೆಡಿಎಸ್ ಮಂಡ್ಯದ ಕಾಮೇಗೌಡರ ನಿಧನಕ್ಕೆ ಸಂತಾಪ ಸೂಚಿಸಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು. ಭಗವಂತ ತಮ್ಮ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
|
ಕಾಮೇಗೌಡರ ಕಾರ್ಯಗಳನ್ನು ನೆನೆದ ಸಚಿವರು
ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಜಲಋಷಿ ಕಾಮೇಗೌಡರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಾಮೇಗೌಡರ ಬಗ್ಗೆ ಬರೆದುಕೊಂಡಿರುವ ಸಚಿವರು, ಮಂಡ್ಯದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ದುಃಖವಾಯಿತು. ಹಲವು ಕೆರೆಗಳನ್ನು ನಿರ್ಮಿಸಿ, ಪಶು-ಪಕ್ಷಿಗಳಿಗೆ ಆಸರೆಯಾಗುವ ಜೊತೆ ನೂರಾರು ಸಸಿ ನೆಟ್ಟು ಬೆಳೆಸಿದ್ದ ಕಾಮೇಗೌಡರಿಗೆ ಪ್ರಕೃತಿ ಸಂರಕ್ಷಣೆ ಬಗೆಗಿದ್ದ ಕಾಳಜಿ ಸಮಾಜಕ್ಕೆ ಮಾದರಿ ಎಂದು ಕಾಮೇಗೌಡರ ಸಮಾಜಮುಖಿ ಕಾರ್ಯಗಳನ್ನು ನೆನೆದಿದ್ದಾರೆ.

ಕಾಮೇಗೌಡರ ಸಾಧನೆ ನೆನೆದ ಬಿಜೆಪಿ ರಾಜ್ಯಾಧ್ಯಕ್ಷ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ 15 ಕಟ್ಟೆ ಕಟ್ಟಿ ಪ್ರಸಿದ್ಧಿ ಪಡೆದಿದ್ದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.
"ಕುರಿಗಾಹಿಯಾಗಿದ್ದ ಅವರು ಕುರಿ ಮಾರಿ ಸಂಪಾದಿಸಿದ ಹಣದಲ್ಲಿ ಬೆಟ್ಟದ ಮೇಲೆ ಕಟ್ಟೆಗಳನ್ನು ತೋಡಿಸಿದ್ದರು. ಪ್ರತಿ ಕಟ್ಟೆಗೂ ದೇವರು ಹಾಗೂ ಮೊಮ್ಮಕ್ಕಳ ಹೆಸರು ಇಟ್ಟಿದ್ದರು. ಹಲವು ವರ್ಷಗಳಿಂದಲೂ ಕಟ್ಟೆಗಳನ್ನು ಸಂರಕ್ಷಿಸಿ ಬೆಟ್ಟದ ತಟದಲ್ಲಿ ಹಸಿರು ಪರಿಸರ ಇರುವಂತೆ ನೋಡಿಕೊಂಡಿದ್ದರು. ಬೆಟ್ಟದ ಮೇಲ್ಭಾಗ ಹಾಗೂ ತಟದಲ್ಲಿ ನೂರಾರು ಸಸಿ ನೆಟ್ಟು ಬೆಳೆಸಿದ್ದರು. ಕಾಮೇಗೌಡರ ಪ್ರಕೃತಿ ಸಂರಕ್ಷಣೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು, 'ಮನ್ ಕಿ ಬಾತ್' ಸರಣಿಯಲ್ಲಿ ಕಾಮೇಗೌಡರ ಸೇವೆಯನ್ನು ಕೊಂಡಾಡಿದ್ದರು".
ಇನ್ನು "ರಾಷ್ಟ್ರಮಟ್ಟದಲ್ಲಿ ಹಲವು ನಾಯಕರು ಅವರ ಸೇವೆಯನ್ನು ಹೊಗಳಿದ್ದರು. ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಅವರ ಸೇವೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಮಾಗೋವಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿದ್ದವು. ಅವರ ಕುಟುಂಬದವರು, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಹಿರಿಯರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಪರಮಾತ್ಮನು ನೀಡಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.

ಕುಮಾರಸ್ವಾಮಿ ಸರ್ಕಾರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಕಾಮೇಗೌಡ
ಕಾಮೇಗೌಡ ಅವರ ನಿಧನಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. "ಪರಿಸರ ಜೀವಿ, ಕೆರೆಗಳ ನಿರ್ಮಾಣದ ಮೂಲಕ ನೀರಿನ ಮಹತ್ವ ಸಾರಿದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಬಹಳ ನೋವಾಯಿತು. ಕುರಿ ಸಾಕಣೆ ಕಾಯಕದಲ್ಲಿ ತೊಡಗಿದ್ದ ಅವರು ತಮ್ಮ ದುಡಿಮೆ ಹಣದಲ್ಲಿಯೇ 14ಕ್ಕೂ ಹೆಚ್ಚು ಕೆರೆ-ಕಟ್ಟೆ ನಿರ್ಮಾಣ ಮಾಡಿ ಸಕ್ಕರೆ ನಾಡಿನ ಆಧುನಿಕ ಭಗೀರಥರಾಗಿದ್ದರು. ಪ್ರಧಾನಿ ಶ್ರೀ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು" ಎಂದರು.
ಇನ್ನು "ಜಲ ಸಂರಕ್ಷಣೆ ಬಗ್ಗೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಅನುಕರಣೀಯ. ಶ್ರೀ ಕಲ್ಮನೆ ಕಾಮೇಗೌಡರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.












Click it and Unblock the Notifications