'ಕೊಡಗಿನಲ್ಲಿ ಕೆಲಸಗಾರರು ಬೇಕಾಗಿದ್ದಾರೆ': ತೋಟದ ಮಾಲೀಕನಿಂದ ಕಾರ್ಮಿಕರಿಗೆ ಭರ್ಜರಿ ಆಫರ್-ದಿನದ ಸಂಬಳ ಎಷ್ಟು ಗೊತ್ತಾ?
ಕೊಡಗು, ಜನವರಿ 05: ಸೂಕ್ತ ಮಳೆ ಬೆಳೆ ಇಲ್ಲದೇ ಜನರು ಪಟ್ಟಣದತ್ತ ಮುಖ ಮಾಡಿದ್ದಾರೆ. ಜಮೀನು ಕೆಲಸ, ತೋಟದ ಕೆಲಸ ಎಂದು ಕೊಂಡಿದ್ದವರು ನಿರುದ್ಯೋಗದ ಭಯದಲ್ಲಿ ಹಾಗೂ ಹೆಚ್ಚಿನ ವೇತನದ ನಿರೀಕ್ಷೆಯಲ್ಲಿ ಬೆಂಗಳೂರು ಸೇರಿದಂತೆ ಇತರ ಮಹಾನಗರಿಗಳತ್ತ ಗುಳೆ ಹೋಗುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸ ಹಾಗೂ ತೋಟದ ಕೆಲಸಗಳಿಗೆ ಕಾರ್ಮಿಕರು ಸಿಗದಂತಾಗಿದೆ.
ಗದ್ದೆ ಹಾಗೂ ಜಮೀನಿನ ಕೆಲಸಗಳನ್ನು ರೈತರು ಹೇಗೋ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಆದರೆ ತೋಟದ ಕೆಲಸ ಕಾರ್ಮಿಕರ ಕೊರತೆಯೇ ಈಗ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದೆ. ಅಡಿಕೆ ಹಾಗೂ ತೆಂಗಿನ ಕಾಯಿಗಳನ್ನು ಕೀಳುವವರು, ತೋಟ ಸಮತಟ್ಟು ಮಾಡುವವರು, ಸಸಿಗಳನ್ನು ನೆಡುವ ಸಂದರ್ಭದಲ್ಲಿ ಗುಂಡಿಗಳನ್ನು ತೆಗೆಯುವವರು ಹೀಗೆ ಕಾರ್ಮಿಕರು ಬೇಕಾಗಿರುವ ಕೆಲಸಗಳ ಪಟ್ಟಿ ದೊಡ್ಡದಾಗುತ್ತದೆ.

ಆದರೆ ಈಗ ಋತುಮಾನಕ್ಕೆ ತಕ್ಕಂತೆ ಸದ್ಯ ಕಾಫಿ ಕೀಳುವ ಕಾರ್ಮಿಕರ ಕೊರತೆ ಉಂಟಾಗಿದೆ. ಸದ್ಯ ಕಾಫಿ ಹಣ್ಣಾಗುವ ಕಾಲ. ಸ್ಪಲ್ಪ ಸಮಯ ಬಿಟ್ಟರೆ ಕಾಫಿ ಹಣ್ಣಾಗಿ ಗಿಡದಿಂದ ಬಿದ್ದು ಹೋಗುತ್ತದೆ. ಹೀಗಾಗಿ ಸೂಕ್ತ ಸಮಯಕ್ಕೆ ಅವುಗಳನ್ನು ಗಿಡದಿಂದ ಕೀಳಬೇಕು. ಆದರೆ ಕಾಫಿ ಕೀಳಲು ಕಾರ್ಮಿಕರು ಸಿಗದೆ ತೋಟದ ಮಾಲೀಕರು ಪರದಾಡುತ್ತಿದ್ದಾರೆ.
ಹಿಂದೆಲ್ಲಾ ಉಡುಪಿ, ದಕ್ಷಿಣ ಕನ್ನಡ ಭಾಗದ ಕಾರ್ಮಿಕರನ್ನು ಚಿಕ್ಕಮಗಳೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಕಡೆಗೆ ಕಾಫಿ ತೋಟದ ಕೆಲಸಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಕ್ರಮೇಣ ಈ ಕ್ರಮ ಕಡಿಮೆಯಾಗಿ, ಅಸ್ಸಾಂ, ಬಿಹಾರ್ ಸೇರಿದಂತೆ ಇತರ ರಾಜ್ಯದ ಕಾರ್ಮಿಕರು ಕಾಫಿ ತೋಟದ ಕೆಲಸಕ್ಕೆ ಬರುತ್ತಿದ್ದರು. ಆದರೆ ಕೆಲವರು ಅಂತರ್ ರಾಜ್ಯ ಕಾರ್ಮಿಕರಿಂದ ಅನೇಕ ಅವಘಡಗಳು ಸಂಭವಿಸಿದ್ದವು. ಬಳಿಕ ಅವರ ಸಂಖ್ಯೆಯೂ ಕಡಿಮೆಯಾಗಿದ್ದು, ಕೆಲವಷ್ಟೇ ಜನರು ಈಗಲೂ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಕಾಫಿ ಕೀಳುವ ಸಮಯದಲ್ಲಿ ಕಾರ್ಮಿಕರ ಸಮಸ್ಯೆಯೇ ಮಾಲೀಕರಿಗೆ ದೊಡ್ಡ ತಲೆ ನೋವಾಗಿದೆ. ಈ ಸಮಯದಲ್ಲಿ ಕಾಫಿ ಕೀಳಲು ಕಾರ್ಮಿಕರಿಗೆ ಭಾರೀ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಅಧಿಕ ಸಂಬಳ ನೀಡಿದರು ಸಹ ಕಾರ್ಮಿಕರ ಅಭಾವವಿದೆ. ಹೀಗಾಗಿ ಕಾಫಿ ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕೊಡಗಿನ ತೋಟದ ಮಾಲೀಕರೊಬ್ಬರು ಕಾರ್ಮಿಕರಿಗಾಗಿ ರಸ್ತೆಗಿಳಿದಿದ್ದಾರೆ.

ಕೊಡಗಿನ ಕಾಫಿ ತೋಟದ ಮಾಲೀಕರೊಬ್ಬರು ಕಾಫಿ ಬೀಜ ಕೀಳಲು ಕಾರ್ಮಿಕರು ಸಿಗದೆ ಬೇಸತ್ತು ಕೊನೆಗೆ ರಸ್ತೆ ಬದಿ ಬಂದು ಕೆಲಸಗಾರರು ಬೇಕು ಎಂದು ಬೋರ್ಡ್ ಹಿಡಿದು ನಿಂತಿದ್ದಾರೆ. ಬೋರ್ಡ್‌ನಲ್ಲಿ ಕೆಲಸಗಾರರು ಬೇಕಾಗಿದ್ದಾರೆ ಎಂದು ದೊಡ್ಡದಾಗಿ ಬರೆಯಲಾಗಿದ್ದು, ಪುರುಷರ ಹಾಗೂ ಮಹಿಳೆಯ ವೇತನವನ್ನು ಕೂಡ ಬೋರ್ಡ್‌ನಲ್ಲಿ ನಮೂದಿಸಿದ್ದಾರೆ.
ಮಹಿಳೆಯರ ದಿನದ ವೇತನ 415 ರೂಪಾಯಿ ಹಾಗೂ ಪುರುಷರ ದಿನದ ವೇತನ 615 ರೂಪಾಯಿ ನೀಡಲಾಗುತ್ತದೆ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೇ ನಿಗದಿತ ಸಮಯಕ್ಕಿಂತ ಜಾಸ್ತಿ ಕೆಲಸ ಮಹಿಳೆಯರು ಮತ್ತು ಪುರುಷರಿಗೆ ಹೆಚ್ಚಿನ ಸಂಬಳ ನೀಡುವುದಾಗಿ ಬೋರ್ಡ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications