ಕೊಡಗಿನಲ್ಲೊಬ್ಬ ಎಲೆಮರೆಯ ಪರಿಸರ ಸಂರಕ್ಷಕ ಹಸೈನಾರ್
ಮಡಿಕೇರಿ, ಜುಲೈ 10: ಕೋವಿಡ್ ನಿಯಂತ್ರಿತ ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯವಾಗಿ ಸಮಯ ವ್ಯರ್ಥ ಮಾಡುತ್ತಾ "ಮನೆಯಲ್ಲಿ ಸುಮ್ಮನೆ ಕೂರುವುದು ಬೋರ್' ಎಂಬ ನೆಪವೊಡ್ಡಿ ಮೊಂಡು ವಾದವನ್ನು ಮುಂದಿಡುವ ಜನರ ಸಂಖ್ಯೆಗೇನು ಇಂದು ಕೊರತೆಯಿಲ್ಲ. ಆದರೆ ಇಳಿವಯಸ್ಸಿನ ವ್ಯಕ್ತಿಯೊಬ್ಬರು ಲಾಕ್‌ಡೌನ್ ಅವಧಿಯನ್ನು ಸಾಮಾಜಿಕ ಕಾರ್ಯಕ್ಕೆ ಮೀಸಲಿಟ್ಟು ಮಾದರಿಯಾದ ಪರಿ ಎಂಥವರನ್ನೂ ನಿಬ್ಬೆರಗಾಗುವಂತೆ ಮಾಡಿದೆ.
ಮಡಿಕೇರಿ ತಾಲ್ಲೂಕಿನ ಕೊಟ್ಟಮುಡಿ ಹೊದವಾಡ ಗ್ರಾಮದ ಕನ್ನಡಿಯಂಡ ಹಸೈನಾರ್ ಎಂಬುವವರೇ ಇದೀಗ ಸಮಾಜದ ಮಾದರಿ ವ್ಯಕ್ತಿಯಾಗಿ ಗುರುತಿಸಲ್ಪಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕ್ಕೆ ಇಳಿ ವಯಸ್ಸು ಇವರಿಗೆ ಅಡ್ಡಿಯಾಗಲಿಲ್ಲ. 62ರ ಪ್ರಾಯದಲ್ಲೂ ತಮ್ಮ ಸಮಾಜಸೇವೆಯ ಹುಮ್ಮಸ್ಸು ಇವರಲ್ಲಿ ಕಡಿಮೆಯಾಗಲಿಲ್ಲ.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸರಕಾರ ಜಾರಿಗೆ ತಂದಿರುವ ಲಾಕ್‌ಡೌನ್ ಸಂಕಷ್ಟ ಸಾಕಷ್ಟು ಜನರ ನಿತ್ಯ ಜೀವನದ ಮೇಲೆ ಪರಿಣಾಮ ಬೀರಿರುವುದಲ್ಲದೆ, ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ಅನಾನುಕೂಲಗಳನ್ನು ಮೆಟ್ಟಿ ನಿಂತ ಕೆಲವರಾದರೂ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡವರಿದ್ದಾರೆ. ಇಂಥವರ ಸಾಲಿನಲ್ಲಿ ಕೊಟ್ಟಮುಡಿ ನಿವಾಸಿ ಕನ್ನಡಿಯಂಡ ಹಸೈನಾರ್ ಸ್ಥಾನ ಪಡೆದುಕೊಂಡಿದ್ದಾರೆ.

ಹಿಂದಿನಿಂದಲೂ ಸಮಾಜ ಸೇವೆಯಲ್ಲಿ ಆಸಕ್ತ
ಕೃಷಿಕರಾಗಿ, ಹಿಂದಿನಿಂದಲೂ ಸಮಾಜ ಸೇವೆಯಲ್ಲಿ ಆಸಕ್ತರಾಗಿರುವ ಹಸೈನಾರ್, ತಮ್ಮ ಬಿಡುವಿನ ಸಮಯದಲ್ಲಿ ಮನೆಯಲ್ಲೇ ಕುಳಿತು ವಿಶ್ರಾಂತಿ ಪಡೆಯುವ ಅವಕಾಶಗಳಿದ್ದರೂ, ಅದರಿಂದ ವಿಮುಖರಾಗಿ ಪ್ರತಿದಿನ ಸಾಮಾಜಿಕ ಕಾರ್ಯಗಳಿಗಾಗಿ ಕೆಲವು ಸಮಯಗಳನ್ನು ಮೀಸಲಿಟ್ಟಿದ್ದಾರೆ. ಇದರ ಭಾಗವಾಗಿ ಅವರು ತಮ್ಮ ಗ್ರಾಮದ ಮೂಲಕ ಹರಿಯುವ ಕಾವೇರಿ ನದಿಯ ನೀರನ್ನು ಸಾಧ್ಯವಾದಷ್ಟು ಶುಚಿಗೊಳಿಸುವ ಕೆಲಸವನ್ನು ಕಳೆದ ಹಲವು ದಿನಗಳಿಂದ ಸದ್ದಿಲ್ಲದೆ ಮಾಡುತ್ತಾ ಬರುತ್ತಿದ್ದು, ಇದನ್ನೇ ಅವರು ಕಾಯಕವನ್ನಾಗಿಸಿಕೊಂಡಿದ್ದಾರೆ.

ಮನೆಯಿಂದ ಸೀದಾ ನದಿಯೆಡೆಗೆ
ಮಧ್ಯಾಹ್ನದ ನಂತರ ಮನೆಯಿಂದ ಸೀದಾ ನದಿಯೆಡೆಗೆ ಬರುವ ಇವರು ಕೊಟ್ಟಮುಡಿಯ ದೊಡ್ಡ ಸೇತುವೆ ಬಳಿ ಹರಿಯುವ ನದಿ ನೀರಿಗೆ ಇಳಿದು ಕಾವೇರಿ ಒಡಲು ಸೇರಿರುವ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಸಾಹಸಮಯವಾಗಿ ನೀರಿನಿಂದ ಹೊರತರುವ ಕೆಲಸ ಮಾಡುತ್ತಿದ್ದಾರೆ. ನೀರಿನ ಆಳ ಹೆಚ್ಚಿರುವಲ್ಲಿಗೆ ಈಜಿಕೊಂಡೇ ಹೋಗುವ ಇವರು, ಅಲ್ಲಿರುವ ಚೀಲ ಚೀಲ ತ್ಯಾಜ್ಯಗಳನ್ನು ಸಂಗ್ರಹಿಸಿ ಒಂದೆಡೆ ಹಾಕುವ ಇವರ ಕಾಯಕಕ್ಕೆ ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

ಅಭಿನಂದನೆಗಳ ಮಹಾಪೂರ
ಯಾವುದೇ ಪ್ರಚಾರದ ಹಂಗಿಲ್ಲದೆ ಕಳೆದ ಹಲವು ದಿನಗಳಿಂದ ಈ ಕೆಲಸ ಮಾಡುತ್ತಿರುವ ಹಸೈನಾರ್ ಏಕಾಂಗಿಯಾಗಿ ಈ ಜಲ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಗಮನಿಸಿದ ಗ್ರಾಮದ ಯುವಕರೊಬ್ಬರು ಹಸೈನಾರ್‌ರ ಈ ಸಾಮಾಜಿಕ ಕಾರ್ಯದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಗ್ರಾಮದ ವಾಟ್ಸಪ್ ಗ್ರೂಪ್‌ಗಳಿಗೆ ಹಾಕಿದ್ದರು. ಮರುದಿನವೇ ಹಸೈನಾರ್ ಅವರ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
62 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ತಮ್ಮ ಇಳಿವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂತೆ ಮಾಡಿರುವ ಈ ಸಾಮಾಜಿಕ ಸಾಮಾಜಿಕ ಕಾರ್ಯಕ್ಕೆ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತಗೊಳ್ಳುತ್ತಿದೆ. ಅಲ್ಲದೆ ಬೇರೆ ಬೇರೆ ಭಾಗಗಳಿಂದ ಹಸೈನಾರ್‌ರಿಗೆ ದೂರವಾಣಿ ಕರೆಗಳ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಕಾರಣದಿಂದಾಗಿ ಪ್ರಚಾರದಿಂದ ದೂರವಿದ್ದ ಹಸೈನಾರ್ ಗ್ರಾಮದಲ್ಲಿ ಇದೀಗ "ರಿಯಲ್ ಹೀರೊ' ಆಗಿ ಗುರುತಿಸಲ್ಪಟ್ಟಿದ್ದಾರೆ.
ಹರಿಯುವ ನೀರಿಗೆ ಅಪಾರವಾದ ಮಹತ್ವ
ಈ ಕುರಿತು ಹಸೈನಾರ್‌ರನ್ನು ಮಾತನಾಡಿಸಿದಾಗ, "ಹರಿಯುವ ನೀರಿಗೆ ಅಪಾರವಾದ ಮಹತ್ವವಿದೆ. ನೀರಿನ ಪ್ರಾಮುಖ್ಯತೆ ಕುರಿತು ಪವಿತ್ರ ಗ್ರಂಥ ಕುರಾನ್‌ನಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಮಲೀನಗೊಂಡಿರುವ ನದಿ ನೀರನ್ನು ಶುಚಿಗೊಳಿಸುವುದು ಪುಣ್ಯ ಕೆಲಸ ಎಂಬುದನ್ನು ಕುರಾನ್ ಸಾರಿ ಹೇಳಿದೆ. ಇದು ತಮಗೆ ಈ ಕೆಲಸ ಮಾಡಲು ಪ್ರೇರಣೆ ನೀಡಿತು,'' ಎಂದು ಹೇಳುತ್ತಾರೆ.
"ಪ್ರತಿದಿನ ಸಾಕಷ್ಟು ತ್ಯಾಜ್ಯಗಳು ಕಾವೇರಿ ನದಿ ಪಾಲಾಗುತ್ತಿದೆ. ಇದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಪವಿತ್ರ ನದಿ ಕಲುಷಿತಗೊಳ್ಳುತ್ತಿದೆ. ನನ್ನಿಂದ ಇಡೀ ನದಿ ನೀರನ್ನು ಶುದ್ಧಿಗೊಳಿಸುವುದು ಸಾಧ್ಯವಿಲ್ಲ. ಆದರೆ ಕನಿಷ್ಠ ನಾನು ಹುಟ್ಟಿದ ನೆಲದ ಭಾಗದಲ್ಲಿ ಹರಿಯುವ ನದಿ ನೀರನ್ನಾದರೂ ಶುದ್ಧೀಕರಣಗೊಳಿಸಬೇಕೆಂದು ಸ್ವಯಂ ನಿರ್ಧರಿಸಿ ಈ ಕೆಲಸಕ್ಕೆ ಮುಂದಾಗಿರುವುದಾಗಿ,'' ತಿಳಿಸಿರುವ ಹಸೈನಾರ್, ಇದು ಕೇವಲ ನನ್ನ ಅಳಿಲು ಸೇವೆಯಷ್ಟೇ. ಇದರಿಂದ ನಾನು ಸಾಧಿಸಿರುವುದು ಏನೂ ಇಲ್ಲ ಎಂದು ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.











Click it and Unblock the Notifications