ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಡಾ.ಮಂತರ್ ಗೌಡ
ಮಡಿಕೇರಿ, ಅಕ್ಟೋಬರ್ 18: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ತುಲಾ ಸಂಕ್ರಮಣ ಜಾತ್ರೆ ಮರುದಿನ ಹಾರಂಗಿ ಜಲಾಶಯದಲ್ಲಿ ಬಾಗಿನ ಅರ್ಪಣೆ ಮಾಡಲಾಗಿದೆ.
ಈ ವೇಳೆ ಕಾವೇರಿ ಪ್ರತಿಮೆಗೆ ಶಾಸಕರಾದ ಡಾ.ಮಂತರ್ ಗೌಡ, ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಮಂಜು, ವಿಧಾನಪರಿಷತ್ ಸದಸ್ಯರಾದ ಎಂ.ಪಿ.ಸುಜಾಕುಶಾಲಪ್ಪ ಇತರರು ಹಾರಂಗಿ ಜಲಾಶಯ ಬಳಿಯ ಕಾವೇರಿ ಪ್ರತಿಮೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಹಾರಂಗಿ ಎಡದಂಡೆ ಮುಖ್ಯ ನಾಲೆ ಸಂಪರ್ಕಿಸುವ 6.87 ಕಿ.ಮೀ. ನಿಂದ 14.75 ಕಿ.ಮೀ.ವರೆಗೆ ಕಾಂಕ್ರೀಟಿಕರಣ ಮಾಡಲು ಸರ್ಕಾರದಿಂದ 72 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು. ಅಲ್ಲದೇ ಈ ಸಂಬಂಧ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ತಾಂತ್ರಿಕ ಬಿಡುಗಡೆಗೆ ಅನುಮೋದನೆ ದೊರೆತಿದೆ. ಜನವರಿ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಡಾ.ಮಂತರ್ ಗೌಡ ಕೊಡಗಿನ ಜನತೆಗೆ ಭರವಸೆ ನೀಡಿದರು.
ಹಾರಂಗಿ ಅಚ್ಚುಕಟ್ಟು ಪ್ರದೇಶ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಪರಿಸರ ಸಂರಕ್ಷಣೆ ಮಾಡಿದಲ್ಲಿ ನದಿಯನ್ನು ಉಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕರು ಕೋರಿದರು. ಅಲ್ಲದೇ
ತಲಕಾವೇರಿ ತುಲಾ ಸಂಕ್ರಮಣ ನಂತರ ಹಾರಂಗಿ ಜಲಾಶಯದಲ್ಲಿರುವ ಕಾವೇರಿ ಮಾತೆಗೆ ಪ್ರತಿ ವರ್ಷ ವಿಶೇಷ ಪೂಜೆ ಸಲ್ಲಿಸಿಕೊಂಡು ಬರಲಾಗಿದೆ. ಈ ನಿಟ್ಟಿನಲ್ಲಿ ನಾಡಿಗೆ ಹಾಗೂ ಜಿಲ್ಲೆಗೆ ಒಳಿತಾಗಲಿ ಎಂದು ಬಾಗಿನ ಅರ್ಪಿಸಲಾಗಿದೆ ಎಂದು ಡಾ.ಮಂತರ್ ಗೌಡ ಅವರು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಹಾರಂಗಿ ನೀರು ಬಳಕೆದಾರರ ಸಹಕಾರ ಮಹಾಮಂಡಲದ ಅಧ್ಯಕ್ಷರಾದ ಚೌಡೇಗೌಡ, ಅಧೀಕ್ಷಕ ಎಂಜಿನಿಯರ್ ರಘುಪತಿ, ಹಾರಂಗಿ ಜಲಾಶಯದ ಇಇ ಐ.ಕೆ.ಪುಟ್ಟಸ್ವಾಮಿ, ತಹಶೀಲ್ದಾರ್ ಕಿರಣ್ ಗೌರಯ್ಯ, ಸಹಾಯಕ ಎಂಜಿನಿಯರ್ ಕಿರಣ್ ದೇವಯ್ಯ, ಸಿದ್ದರಾಜು, ಸೌಮ್ಯ, ಸಂಧ್ಯಾ, ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಘಟಕದ ಅಧ್ಯಕ್ಷರಾದ ವಿ.ಪಿ.ಶಶಿಧರ, ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷರಾದ ಭಾಸ್ಕರ ನಾಯ್ಕ್, ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಂಜಿನಿಯರ್‌ಗಳು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications