ಧರ್ಮಸ್ಥಳ ವತಿಯಿಂದ ಕೊಡಗಿನ ಸರ್ಕಾರಿ ಶಾಲೆಗಳಿಗೆ 72.25 ಲಕ್ಷ ರೂ ಮೌಲ್ಯದ ಬೆಂಚು-ಡೆಸ್ಕ್ ವಿತರಣೆ
ಮಡಿಕೇರಿ, ನವೆಂಬರ್ 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಕೊಡಗು ಜಿಲ್ಲೆಯ 98 ಸರ್ಕಾರಿ ಶಾಲೆಗಳಿಗೆ ರೂ 72.25 ಲಕ್ಷ ಮೌಲ್ಯದ ಬೆಂಚು ಹಾಗೂ ಡೆಸ್ಕ್ ವಿತರಣೆ ಮಾಡಲಾಗಿದೆ. ಡೆಸ್ಕ್-ಬೆಂಚು ವಿತರಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಸರ್ಕಾರಿ ಶಾಲೆಗಳಿಗೆ ನೀಡುವ ಸೌಲಭ್ಯ ಸದುಪಯೋಗವಾಗಲಿ ಎಂದರು.
ರಾಜ್ಯದಲ್ಲಿ ಸರಕಾರಿ ಶಾಲೆಗಳು ಇಂದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಶಿಕ್ಷಕರ ಕೊರತೆ ಕಾಡುತ್ತಿದೆ. ಈ ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳು ಭರ್ತಿಯಾದಲ್ಲಿ ಮತ್ತಷ್ಟು ಉತ್ತಮ ಶಿಕ್ಷಣ ನೀಡಲು ಸಾಧ್ಯವೆಂದು ಎಂದು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ತಾಲೂಕುಗಳ 507 ಶಾಲೆಗಳಿಗೆ ಒಟ್ಟು 2.74 ಕೋಟಿ ಮೊತ್ತದ 4,044 ಜೊತೆ ಡೆಸ್ಕ್- ಬೆಂಚು ವಿತರಣ ಸಮಾರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಮೂಲಸೌಕರ್ಯಗಳೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳು ಉಳಿಯಲು ದಾಖಲಾತಿ ಹೆಚ್ಚಿಸುವಲ್ಲಿ ಪೋಷಕರು ಗಮನ ವಹಿಸಿ ಸರಕಾರದ ಸವಲತ್ತು ಸುದುಪಯೋಗಪಡಿಸಿಕೊಂಡು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಕರ ಹುದ್ದೆಗಳನ್ನು ಸರಕಾರ ಭರ್ತಿ ಮಾಡಿದಲ್ಲಿ ಹೆಚ್ಚು ಸರಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ಪ್ರಸಕ್ತ ವರ್ಷ 1,030 ಜ್ಞಾನದೀಪ ಅತಿಥಿ ಶಿಕ್ಷಕರನ್ನು ಸರಕಾರಿ ಶಾಲೆಗಳಲ್ಲಿ ನೇಮಿಸಲಾಗಿದೆ. ಕಳೆದ ವರ್ಷ 45 ಸಾವಿರ, ಪ್ರಸಕ್ತ ವರ್ಷ 65 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಗಿದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದ.ಕ.ಜಿಲ್ಲಾ ಉಪ ನಿರ್ದೇಶಕ ವೆಂಕಟೇಶ್ ಸುಬ್ರಾಯ ಪಟಗಾರ್ ಮಾತನಾಡಿ, ಧರ್ಮಸ್ಥಳದ ಕೊಡುಗೆಯಿಂದಾಗಿ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆ, ದ.ಕ. ಜಿ.ಪಂ. ಸಿಇಒ ಆನಂದ ಕೆ.. ತಾ.ಪಂ. ಇಒ ಭವಾನಿಶಂಕರ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ತುಳುಪುಳೆ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ವಿಮಲಾ ಉಪಸ್ಥಿತರಿದ್ದರು.
ಕೊಡಗು ಜಿಲ್ಲೆಯೊಂದಕ್ಕೆ 850 ಜೊತೆ ಬೆಂಚು-ಡೆಸ್ಕ್ ವಿತರಣೆ
ಕೊಡಗು ಜಿಲ್ಲೆಯ 98 ಸರ್ಕಾರಿ ಶಾಲೆಗಳಿಗೆ ರೂ 72.25 ಲಕ್ಷ ಮೌಲ್ಯದ ಬೆಂಚು-ಡೆಸ್ಕ್ ವಿತರಣೆ ಮಾಡಲಾಗಿದೆ. ರಾಜ್ಯದ ಒಟ್ಟು 11,000 ಶಾಲೆಗಳಿಗೆ ಈವರೆಗೆ 26 ಕೋಟಿ ರೂ. ವೆಚ್ಚದಲ್ಲಿ 72,000 ಜತೆ ಬೆಂಚು ಡೆಸ್ಕ್ ವಿತರಣೆ ಮಾಡಲಾಗಿದ್ದು, ಮಡಿಕೇರಿ ತಾಲೂಕಿಗೆ 17 ಸರಕಾರಿ ಶಾಲೆಗಳಿಗೆ ರೂಪಯಿ 11.82 ಲಕ್ಷ ಮೌಲ್ಯದ ಬೆಂಚು-ಡೆಸ್ಕ್ ವಿತರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications