ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು
ಹತ್ರಾಸ್, ಸೆಪ್ಟೆಂಬರ್ 29: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತ ಮಹಿಳೆ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ದೆಹಲಿಯಿಂದ 200 ಕಿಲೋ ಮೀಟರ್ ದೂರದಲ್ಲಿ ಹತ್ರಾಸ್ ಎಂಬ ಗ್ರಾಮದಲ್ಲಿ ಕಳೆದ ಸೆಪ್ಟೆಂಬರ್ 14ರಂದು ಮಹಿಳೆ ಮೇಲೆ ಅತ್ಯಾಚಾರ ನಡೆದಿತ್ತು. ಗದ್ದೆಯೊಂದರಲ್ಲಿ ಮಹಿಳೆ ತನ್ನ ಕುಟುಂಬದವರ ಜೊತೆ ಹುಲ್ಲು ಕೀಳುತ್ತಿದ್ದ ವೇಳೆ ಆಕೆಯನ್ನು ದುಪ್ಪಟ್ಟಾ ಹಿಡಿದು ಎಳೆದುಕೊಂಡು ಹೋಗಿ ನಾಲ್ವರು ಪುರುಷರು ಅತ್ಯಾಚಾರವೆಸಗಿದ್ದರು.
ಮಹಿಳೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರದಿದ್ದಾಗ ಆಕೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ವರು ಆರೋಪಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ದೇಹದ ಹಲವು ಕಡೆಗಳಲ್ಲಿ ಗಾಯ, ನಾಲಗೆ ಕತ್ತರಿಸಿ ಹೋಗಿತ್ತು.

ಎಲ್ಲಾ ನಾಲ್ವರು ಆರೋಪಿಗಳು ಜೈಲಿನಲ್ಲಿದ್ದಾರೆ. ಆರಂಭದಲ್ಲಿ ಉತ್ತರ ಪ್ರದೇಶ ಪೊಲೀಸರು ತಮ್ಮ ನೆರವಿಗೆ ಬಂದಿರಲಿಲ್ಲ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ನಂತರವಷ್ಟೇ ಪೊಲೀಸರು ಸ್ಪಂದಿಸಿದರು ಎಂದು ಮಹಿಳೆಯ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.












Click it and Unblock the Notifications