Breaking News: ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ
ಲಕ್ನೋ, ಜನವರಿ 8: ಭಾರತದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಶನಿವಾರ ದಿನಾಂಕವನ್ನು ಪ್ರಕಟಿಸಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಪಂಚರಾಜ್ಯಗಳ ಚುನಾವಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಮರುಪರಿಶೀಲನೆ, ನಾಮಪತ್ರ ವಾಪಸ್, ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದ್ದಾರೆ. ಪಂಚರಾಜ್ಯಗಳ ಪೈಕಿ 403 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಪಂಚರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕೊವಿಡ್-19 ಹೊಸ ಶಿಷ್ಟಾಚಾರ ಮತ್ತು ನಿಯಮಗಳ ಪಾಲನೆಗೆ ಸೂಚಿಸಲಾಗಿದೆ. ಪಂಚರಾಜ್ಯ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ನೌಕರರನ್ನು ಮುಂಚೂಣಿಯ ಕಾರ್ಯಕರ್ತರು ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಅರ್ಹ ಅಧಿಕಾರಿಗಳಿಗೆ 'ಮುನ್ನೆಚ್ಚರಿಕೆಯ ಡೋಸ್' ಲಸಿಕೆ ನೀಡಲಾಗುತ್ತದೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ:
- ಮೊದಲ ಹಂತದಲ್ಲಿ ಫೆಬ್ರವರಿ 10ರಂದು ಮತದಾನ
- ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ಮತದಾನ
- ಮೂರನೇ ಹಂತದಲ್ಲಿ ಫೆಬ್ರವರಿ 20ರಂದು ಮತದಾನ
- ನಾಲ್ಕನೇ ಹಂತದಲ್ಲಿ ಫೆಬ್ರವರಿ 23ರಂದು ಮತದಾನ
- ಐದನೇ ಹಂತದಲ್ಲಿ ಫೆಬ್ರವರಿ 27ರಂದು ಮತದಾನ
- ಆರನೇ ಹಂತದಲ್ಲಿ ಮಾರ್ಚ್ 3ರಂದು ಮತದಾನ
- ಏಳನೇ ಹಂತದಲ್ಲಿ ಮಾರ್ಚ್ 7ರಂದು ಮತದಾನ
ಉತ್ತರ ಪ್ರದೇಶ ಗದ್ದುಗೆ ಹಿಡಿಯಲು ಪೈಪೋಟಿ:
ದೇಶದಲ್ಲಿ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದಕ್ಕೆ ಬಿಜೆಪಿ, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ಅತಿಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ರಾಜ್ಯದ ಮತದಾರರ ಮನ ಗೆಲ್ಲುವುದಕ್ಕಾಗಿ ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಸಾಕಷ್ಟು ಯೋಜನೆಗಳಿಗೆ ಚಾಲನೆ ನೀಡಿದ್ದರು.
2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗದ್ದುಗೆ:
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications