ಲಖಿಂಪುರ್ ಖೇರಿಗೆ ತೆರಳಲು ಪ್ರಿಯಾಂಕಾ, ರಾಹುಲ್ ಗಾಂಧಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ
ಲಕ್ನೋ, ಅಕ್ಟೋಬರ್ 06: ರೈತರ ಮೇಲಿನ ಹಿಂಸಾಚಾರದಿಂದಾಗಿ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಲಖಿಂಪುರ್ ಖೇರಿಗೆ ತೆರಳಲು ಕಾಂಗ್ರೆಸ್ ನಾಯಕರಿಗೂ ಕೊನೆಗೂ ಉತ್ತರ ಪ್ರದೇಶ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರೆ ಮೂವರಿಗೆ ಅನುಮತಿ ನೀಡಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ಭಾನುವಾರ ರಾತ್ರಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು.

ಆದರೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಕಾರನ್ನು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಈ ಘಟನೆಯಿಂದ ಹಿಂಸಾಚಾರ ನಡೆದಿದ್ದು, ಇಲ್ಲಿಯವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ಲಖೀಂಪುರಖೇರಿಗೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ಈ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಅವರನ್ನುಅಡ್ಡಗಟ್ಟಿದ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರು ವಶಕ್ಕೆ ಪಡೆದ ವಿಡಿಯೋ ಕೂಡ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ, ಸಾವನ್ನಪ್ಪಿದ ಅಮಾಯಕ ಜನರಿಗಿಂತ ನಾನು ಮುಖ್ಯವಾದವಳಲ್ಲ.
ನೀವು ಸರ್ಕಾರವನ್ನು ರಕ್ಷಿಸುತ್ತಿದ್ದೀರ. ನನ್ನನ್ನು ಬಂಧಿಸಲು ನಿಮ್ಮ ಬಳಿ ವಾರೆಂಟ್ ಇದೆಯೇ? ವಾರೆಂಟ್ ನೀಡದಿದ್ದರೆ ನೀವು ನನ್ನನ್ನು ಮುಟ್ಟುವಂತಿಲ್ಲ ಎಂದು ಹೇಳಿದ್ದರು.
ಪೊಲೀಸರು ಅವರನ್ನು ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿರಿಸಿದ್ದರು.
ಉತ್ತರ ಪ್ರದೇಶದ ಸೀತಾಪುರದ ಪಿಎಸಿ ಗೆಸ್ಟ್ ಹೌಸ್ ನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದ್ದು, ಬಂಧನ ಬಳಿಕ ಪ್ರಿಯಾಂಕಾ ಗಾಂಧಿ ತಮ್ಮ ಕೊಠಡಿಯನ್ನು ಖುದ್ದು ತಾವೇ ಪೊರಕೆ ಹಿಡಿದು ಕಸ ಗುಡಿಸಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಬಳಿಕ ಶಾಂತಿಭಂಗ ತಂದ ಆರೋಪದ ಮೇಲೆ ಅವರನ್ನು ಬಂಧಿಸಿದ ಪೊಲೀಸರು ಎಫ್ ಐಆರ್ ಕೂಡ ದಾಖಲಿಸಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನ ಸಂಪೂರ್ಣ ಕಾನೂನುಬಾಹಿರ ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರು, ಉತ್ತರ ಪ್ರದೇಶದಲ್ಲಿ ಕಾನೂನಿಗೆ ಬೆಲೆ ಇಲ್ಲ ಎಂದು ಆರೋಪಿಸಿದ್ದರು.
ಉತ್ತರ ಪ್ರದೇಶದಲ್ಲಿ ಪೊಲೀಸರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾನೂನು ಮತ್ತು ಅವರ ಆದೇಶವನ್ನು ಮಾತ್ರ ಪಾಲಿಸುತ್ತಿದ್ದಾರೆ ಎಂದು ಚಿದಂಬರಂ ದೂರಿದ್ದಾರೆ.
ಲಖಿಂಪುರ್ ಖೇರಿಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದಲ್ಲಿ ಬಂಧಿಸಲಾಯಿತು.
ಸೀತಾಪುರದಲ್ಲಿ ಪ್ರಿಯಾಂಕಾ ಗಾಂಧಿಯ ಬಂಧನಕ್ಕೆ ಸಂಬಂಧಿಸಿದ ಸತ್ಯಗಳು ಮತ್ತು ಸನ್ನಿವೇಶಗಳು "ಉತ್ತರ ಪ್ರದೇಶದಲ್ಲಿ ಕಾನೂನಿನ ನಿಯಮವಿಲ್ಲ ಎಂದು ಖಚಿತವಾಗಿ ದೃಢಪಡಿಸುತ್ತದೆ" ಎಂದು ಚಿದಂಬರಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಅಕ್ಟೋಬರ್ 4, ಸೋಮವಾರ ಬೆಳಗ್ಗೆ 4.30ಕ್ಕೆ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಲಾಗಿದೆ. ಸೀತಾಪುರದ ಪಿಎಸಿ ಅತಿಥಿ ಗೃಹದಲ್ಲಿ ಅವರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಸಂಬಂಧಿತ ನ್ಯಾಯಾಧೀಶರು ಇಬ್ಬರೂ ಸೀತಾಪುರದಲ್ಲೇ ನೆಲೆಸಿದ್ದಾರೆ. ಗಾಂಧಿಯ ಬಂಧನ ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಧಿಕಾರದ ದುರುಪಯೋಗ" ಎಂದು ಕೇಂದ್ರ ಮಾಜಿ ಗೃಹ ಸಚಿವ ಚಿದಂಬರಂ ಹೇಳಿದ್ದಾರೆ.
"ಪೊಲೀಸ್ ಅಧಿಕಾರಿ ಪ್ರಿಯಾಂಕಾ ಗಾಂಧಿಯನ್ನು ಸಿಆರ್‌ಪಿಸಿ ಸೆಕ್ಷನ್ 151 ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಸೆಕ್ಷನ್ 151 ರ ಅಡಿಯಲ್ಲಿ ಬಂಧಿಸಿದ ಯಾವುದೇ ವ್ಯಕ್ತಿಯನ್ನು ನ್ಯಾಯಾಧೀಶರ ಆದೇಶವಿಲ್ಲದೆ 24 ಗಂಟೆಗಳಿಗಿಂತ ಹೆಚ್ಚು ಕಾಲ ಬಂಧಿಸುವಂತಿಲ್ಲ" ಎಂದು ಚಿದಂಬರಂ ಎಂದು ಹೇಳಿದ್ದರು. ಇದೀಗ ಉತ್ತರ ಪ್ರದೇಶ ಸರ್ಕಾರವು ಕಾಂಗ್ರೆಸ್ ನಾಯಕರಿಗೆ ಲಖಿಂಪುರಕ್ಕೆ ತೆರರಳು ಅವಕಾಶ ಮಾಡಿಕೊಟ್ಟಿದೆ.












Click it and Unblock the Notifications