ಉ.ಪ್ರ, ಪಶ್ಚಿಮ ಬಂಗಾಳದಲ್ಲಿ ಐಎಸ್‌ಐಎಸ್ ಉಗ್ರರ ಸಂಚಾರ
ಕೋಲ್ಕತ್ತಾ, ಜನವರಿ 06 : ಉತ್ತರ ಪ್ರದೇಶದಲ್ಲಿ ಇಬ್ಬರು ಐಎಸ್‌ಐಎಸ್ ಉಗ್ರರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಇಬ್ಬರೂ ಪಶ್ಚಿಮ ಬಂಗಾಳದಲ್ಲಿಯೂ ಕಾಣಿಸಿಕೊಂಡಿದ್ದರು ಎಂಬ ಮಾಹಿತಿ ಈಗ ಲಭ್ಯವಾಗಿದೆ.
ಅಬ್ದುಲ್ ಮತ್ತು ಇಲಿಯಾಸ್ ಎಂಬ ಇಬ್ಬರು ಉಗ್ರರು ಉತ್ತರ ಪ್ರದೇಶ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ನೇಪಾಳಕ್ಕೆ ಪರಾರಿಯಾಗಲು ಇಬ್ಬರೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು.
ಭಾರತ ನೇಪಾಳ ಗಡಿ ಭಾಗದಲ್ಲಿ ಐಎಸ್‌ಐಎಸ್ ವಿದ್ಯಾರ್ಥಿಗಳ ತಂಡ ಕಟ್ಟಲು ಪ್ರಯತ್ನ ನಡೆಸಿದೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿತ್ತು. ಇಬ್ಬರು ಉಗ್ರರು ಸಿಲಿಗುರಿಯಲ್ಲಿ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಐಎಸ್‌ಐಎಸ್ ಚಟುವಟಿಕೆ ಸಕ್ರಿಯವಾಗಿದೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಉಗ್ರರನ್ನು ಪತ್ತೆ ಹಚ್ಚಲು ಪೊಲೀಸರು ಮೂರು ತಂಡಗಳನ್ನು ರಚನೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ವಿವಿಧ ಪ್ರದೇಶದಲ್ಲಿ ತಂಡ ಉಗ್ರರ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಮತ್ತೊಂದು ಕಡೆ ಉತ್ತರ ಪ್ರದೇಶದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರತ ಮತ್ತು ನೇಪಾಳ 1,751 ಕಿ. ಮೀ. ಗಡಿ ಪ್ರದೇಶವನ್ನು ಹಂಚಿಕೊಂಡಿವೆ. ಈ ಭಾಗದಲ್ಲಿ ಐಎಸ್‌ಐಎಸ್ ತನ್ನ ವಿದ್ಯಾರ್ಥಿ ನೆಲೆ ಸ್ಥಾಪನೆ ಮಾಡಲು ಪ್ರಯತ್ನ ನಡೆಸಿದೆ ಎಂಬುದು ಗುಪ್ತಚರ ಇಲಾಖೆ ಮಾಹಿತಿಯಾಗಿದೆ. ಉತ್ತರ ಪ್ರದೇಶ ಸಹ ಏಳು ಜಿಲ್ಲೆಗಳಲ್ಲಿ ನೇಪಾಳ ಜೊತೆ ಗಡಿ ಹಂಚಿಕೊಂಡಿದೆ.
ಇಬ್ಬರೂ ಉಗ್ರರ ಭಾವಚಿತ್ರಗಳನ್ನು ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳಿಸಲಾಗಿದೆ. ಎರಡೂ ರಾಜ್ಯಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications