ರಾಯ್ಬರೇಲಿಯಲ್ಲಿ ಪ್ರಿಯಾಂಕಾ ಪರಿಚಯಿಸಿದ ನೆಹರೂ ಕುಟುಂಬದ ಕುಡಿ ಯಾರು?
ಲಕ್ನೋ, ಮೇ 04: ನೆಹರೂ-ಗಾಂಧಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದೆ! ಹೌದು, ಸ್ವತಃ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೇ 'ಆಕೆ'ಯನ್ನು ಪರಿಚಯಿಸಿದ್ದಾರೆ!
ಇತ್ತೀಚೆಗೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ತಮ್ಮ ತಾಯಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರವಾಗಿ ಪ್ರಚಾರ ಮಾಡೂತ್ತಿದ್ದ ಸಮಯದಲ್ಲಿ, ಮಹಿಳೆಯೊಬ್ಬರನ್ನು ತಮ್ಮ 'ಸಹೋದರಿ' ಎಂದು ಪರಿಚಯಿಸಿದರು.
ಪ್ರಿಯಾಂಕಾ ಗಾಂಧಿ ಅವರ ಈ ಮಾತನ್ನು ಕೇಳಿ ಮಾಧ್ಯಮಗಳ ಕ್ಯಾಮರಾ ಪ್ರಿಯಾಂಕಾ ಪಕ್ಕದಲ್ಲಿದ್ದ ಮಹಿಳೆಯತ್ತ ತಿರುಗಿತ್ತು. ಆವಂತಿಕಾ ನೆಹರೂ ಎಂಬ ಹೆಸರಿನ ಈ ಮಹಿಳೆ ನಿಜಕ್ಕೂ ನೆಹರು ಗಾಂಧಿ ಕುಟುಂಬದ ಕುಡಿಯೇ. ಇಂದಿರಾ ಗಾಂಧಿ ಅವರ ಆಪ್ತ, ಸೋದರ ಸಂಬಂಧಿ ಅರುಣ್ ನೆಹರು ಅವರ ಪುತ್ರಿ ಆವಂತಿಕಾ ನೆಹರು ಈ ಮೂಲಕ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.

1980 ರಲ್ಲಿ ಇಂದಿರಾ ಗಾಂಧಿ ಅವರು ಉತ್ತರ ಪ್ರದೇಶದ ರಾಯ್ಬರೇಲಿ ಮತ್ತು ಆಂಧ್ರ ಪ್ರದೇಶದ ಮೇದಕ್ ಎರಡು ಕ್ಷೇತ್ರಗಳಿಂದಲೂ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಈ ಸಂದರ್ಭದಲ್ಲಿ ಮೇದಕ್ ಕ್ಷೇತ್ರವನ್ನು ಅರುಣ್ ನೆಹರು ಅವರಿಗೆ ಬಿಟ್ಟುಕೊಟ್ಟಿದ್ದರು.
ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದ ಅರುಣ್ ಗಾಂಧಿ, ಬೋಫೋರ್ಸ್ ಹಗರಣದ ನಂತರ ರಾಜೀವ್ ಗಾಂಧಿ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ ಅವರು ವಿಪಿ ಸಿಂಗ್ ಅವರೊಂದಿಗೆ ಕೈಜೋಡಿಸಿದ್ದರು. 1999 ರಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು.
ಈ ಮೂಲಕ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಎದ್ದಿತ್ತು. ಆದರೆ ಇದೀಗ ಆ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಮರೆತು ಎರಡು ಕುಟುಂಬಗಳು ಒಂದಾಗಿದ್ದು, ಅವಂತಿಕಾ ಅವರನ್ನು ಪ್ರಿಯಾಕಾ ಚೋಪ್ರಾ ರಾಜಕೀಯಕ್ಕೆ ಕರೆತಂದಿದ್ದಾರೆ. ಆವಂತಿಕಾ ಅವರ ಭವಿಷ್ಯವನ್ನು ರಾಜಕೀಯ ಕ್ಷೇತ್ರದಲ್ಲಿ ಕಂಡ ಪ್ರಿಯಾಂಕಾ ನಡೆ ನಿಗೂಢವೆನ್ನಿಸಿರುವುದು ಸತ್ಯ.












Click it and Unblock the Notifications