ಈ ಫೋಟೊ ನೋಡಿ ಬೆರಗಾದ್ರೇನು? ಯೋಗಿ ಜೊತೆ ಅಖಿಲೇಶ್ ಊಟ!
ಲಕ್ನೋ, ಮೇ 16: ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ, ಬದ್ಧ ವೈರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಕುಳಿತು ಪೂರಿ, ಸಬ್ಜಿ ತಿನ್ನುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ ಆ ಚಿತ್ರದಲ್ಲಿರುವುದು ಯೋಗಿ ಆದಿತ್ಯನಾಥ್ ಅಲ್ಲ, ಬದಲಾಗಿ ಅವರನ್ನೇ ಹೋಲುವ ವ್ಯಕ್ತಿ!

ಈ ಚಿತ್ರವನ್ನು ಅಖಿಲೇಶ್ ಯಾದವ್ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, "ಮುಖ್ಯಮಂತ್ರಿಗಳ ಮನೆಯನ್ನು ಗಂಗಾಜಲದಿಂದ ತೊಳೆದ ನಂತರ ಅವರು ನನ್ನೊಂದಿಗೆ ಊಟ ಮಾಡುತ್ತಿದ್ದಾರೆ" ಎಂದು ಗೇಲಿ ಮಾಡಿದ್ದಾರೆ.
ಥೇಟು ಯೋಗಿ ಆದಿತ್ಯನಾಥ್ ಅವರನ್ನೇ ಹೋಲುವ ಈ ವ್ಯಕ್ತಿಯ ಹೆಸರು, ಸುರೇಶ್ ಠಾಕೂರ್. ಯೋಗಿ ಅವರಂತೆಯೇ ಕಾವಿ ಬಟ್ಟೆ ತೊಡುವ ಈ ವ್ಯಕ್ತಿ ಸಮಾಜವಾದಿ ಪಕ್ಷದ ಬೆಂಬಲಿಗ! ಹಲವು ಬಾರಿ ಅಖಿಲೇಶ್ ಯಾದವ್ ಅವರೊಂದಿಗೆ ವೇದಿಕೆಯಲ್ಲೂ ಇವರು ಕಾಣಿಸಿಕೊಂಡಿದ್ದರು.
80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಏಳೂ ಹಂತಗಳಲ್ಲೂ ಮತದಾನ ನಡೆಯುತ್ತಿದ್ದು ಮೇ 19 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.
ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಅಖಿಲೇಶ್ ಯಾದವ್ ಇತ್ತೀಚೆಗೆ ವೇದಿಕೆಯಲ್ಲಿ ಯೋಗಿ ತದ್ರೂಪಿಯನ್ನೂ ಕೂರಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.












Click it and Unblock the Notifications