ಬರೀ ಲಾಡು ತಿನ್ನಿಸುತ್ತಾಳೆಂದು ಪತ್ನಿಯಿಂದ ವಿಚ್ಛೇದನ ಕೇಳಿದ ಪತಿ
ಮೀರತ್ (ಉತ್ತರಪ್ರದೇಶ), ಆಗಸ್ಟ್ 20: ಉತ್ತರಪ್ರದೇಶದ ಮೀರತ್ ನಲ್ಲಿ ಪುರುಷ ಮಹಾಶಯನೊಬ್ಬ ಪತ್ನಿಯಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಿದ್ದಾನೆ. ಆದರೆ ಈ ಪ್ರಕರಣ ವಿಚಿತ್ರವಾಗಿದೆ. ಏಕೆಂದರೆ, ತಾಂತ್ರಿಕನೊಬ್ಬನ ಮಾತು ಕೇಳಿ, ನನ್ನ ಹೆಂಡತಿ ಲಾಡು ಬಿಟ್ಟು ಬೇರೇನನ್ನೂ ತಿನ್ನುವುದಕ್ಕೆ ನೀಡುತ್ತಿಲ್ಲ ಎಂಬುದು ಆತನ ಅಹವಾಲು.
ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿರುವ ಆತ, ತಾಂತ್ರಿಕನೊಬ್ಬನ ಇಶಾರೆಯಂತೆ ನನ್ನ ಹೆಂಡತಿ ಬೆಳಗ್ಗೆ ನಾಲ್ಕು ಲಾಡು, ಸಂಜೆ ನಾಲ್ಕು ಲಾಡು ತಿನ್ನುವುದಕ್ಕೆ ನೀಡುತ್ತಿದ್ದಾಳೆ. ಮಧ್ಯ ಸಮಯದಲ್ಲಿ ಏನೂ ನೀಡುವುದಿಲ್ಲ ಹಾಗೂ ತಿನ್ನುವುದಕ್ಕೂ ಬಿಡುವುದಿಲ್ಲ ಎಂದು ಆತ ಅಲವತ್ತುಕೊಂಡಿದ್ದಾನೆ.
ಈ ದಂಪತಿಗೆ ಮದುವೆಯಾಗಿ ಹತ್ತು ವರ್ಷಗಳಾಗಿದ್ದು, ಮೂರು ಮಕ್ಕಳಿವೆ. "ನನಗೆ ಕೆಲ ಸಮಯದಿಂದ ತೊಂದರೆ ಆಗಿತ್ತು. ತಾಂತ್ರಿಕನೊಬ್ಬನನ್ನು ಭೇಟಿ ಆದ ನನ್ನ ಹೆಂಡತಿ ಪರಿಹಾರ ಕೇಳಿದ್ದಾಳೆ. ಬರೀ ಲಾಡು ಮಾತ್ರ ತಿನ್ನಲು ನೀಡಬೇಕು ಎಂದು ಆತ ನೀಡಿದ ಸಲಹೆ ಮೇರೆಗೆ ಹೀಗೆ ಮಾಡುತ್ತಿದ್ದಾಳೆ" ಎಂಬುದು ಪತಿ ಮಹಾಶಯನ ದೂರು.

"ನಾವು ಕೌನ್ಸೆಲಿಂಗ್ ಗಾಗಿ ಆ ದಂಪತಿಯನ್ನು ಕರೆಯಬಹುದು. ಆದರೆ ಮಹಿಳೆಯ ಮೂಢನಂಬಿಕೆಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ತನ್ನ ಗಂಡನ ಸಮಸ್ಯೆಗೆ ಲಾಡು ನೀಡುವುದರ ಹೊರತಾಗಿ ಬೇರೆ ಪರಿಹಾರ ಇಲ್ಲ ಎಂದು ಆ ಮಹಿಳೆ ನಂಬಿದ್ದಾಳೆ. ಅದರ ಹೊರತಾಗಿ ಬೇರೆ ಏನನ್ನೂ ನಂಬುವ ಸ್ಥಿತಿಯಲ್ಲಿ ಆಕೆ ಇಲ್ಲ" ಎಂದು ಕುಟುಂಬ ಸಮಸ್ಯೆಗಳಿಗೆ ಸಲಹೆ ನೀಡುವವರು ಹೇಳಿದ್ದಾರೆ.












Click it and Unblock the Notifications