ಉತ್ತರ ಪ್ರದೇಶದಲ್ಲಿ 74 ಸೀಟಲ್ಲಿ ಗೆಲ್ಲೋದು ಪಕ್ಕಾ ಎಂದ ಬಿಜೆಪಿ!
ಲಕ್ನೋ, ಜನವರಿ 17: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 74 ಸ್ಥಾನಗಳನ್ನು ಗೆಲ್ಲುವುದು ಖಂಡಿತ ಎಂದು ಬಿಜೆಪಿ ಮುಖಂಡ ಜೆಪಿ ನಡ್ಡಾ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಈ ಸವಾಲನ್ನು ಸ್ವೀಕರಿಸಲು ನಾವು ಸಿದ್ಧ. ಇದರಿಂದ ನಮಗೆ ಯಾವುದೇ ನಷ್ಟವಿಲ್ಲ ಎಂದಿದ್ದಾರೆ.
"ನಮ್ಮ ಬಳಿ ಎಲ್ಲರೀತಿಯ ಕಾರ್ಯತಂತ್ರಗಳೂ ಇವೆ. ಚುನಾವಣೆ ಎಂದರೆ ಫಿಸಿಕ್ಸ್ ಅಲ್ಲ, ಅದು ಕೆಮೆಸ್ಟ್ರಿ. ಅದು ಪಕ್ಷಕ್ಕೂ, ಮತದಾರರಿಗೂ ನಡುವಿನ ಕೆಮೆಸ್ಟ್ರಿ. ನಮಗೆ ಮತದಾರರೊಂದಿಗಿರುವ ಕೆಮೆಸ್ಟ್ರಿ ನಮ್ಮನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲಿದೆ" ಎಂದು ಕೇಂದ್ರ ಆರೋಗ್ಯ ಸಚಿವ ನಡ್ಡಾ ಹೇಳಿದರು.

ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ ಇದಾಗಿದೆ. ಈ 80 ಸೀಟುಗಳಲ್ಲಿ 74 ಕ್ಷೇತ್ರಗಳನ್ನು ತಾನು ಗೆಲ್ಲುವುದಾಗಿ ಬಿಜೆಪಿ ಹೇಳಿದೆ.
ಕಳೆದ ವಾರವಷ್ಟೇ ಕಾಂಗ್ರೆಸ್ ಅನ್ನು ಹೊರಗಿಟ್ಟು ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಗೆ ಲಾಭವೇ ಎನ್ನಲಾಗುತ್ತಿದ್ದು, ಪ್ರತಿಪಕ್ಷಗಳು ಯಾವೆಲ್ಲ ರೀತಿಯ ಕಾರ್ಯತಂತ್ರ ರೂಪಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications