ಉತ್ತರ ಪ್ರದೇಶ; 20 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡ ವ್ಯಕ್ತಿ
ಲಕ್ನೋ, ಜನವರಿ 30 : 20 ಶಾಲಾ ಮಕ್ಕಳನ್ನು ವ್ಯಕ್ತಿಯೊಬ್ಬ ಒತ್ತೆಯಾಗಿರಿಸಿಕೊಂಡ ಘಟನೆ ನಡೆದಿದೆ. ಮಕ್ಕಳನ್ನು ವಶದಲ್ಲಿ ಇರಿಸಿಕೊಂಡಿರುವ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಅಪರಾಧಿ. ಆತನ ಕೈಯಲ್ಲಿ ಗನ್ ಇದ್ದು ಗುಂಡಿನ ದಾಳಿಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ.
ಗುರುವಾರ ಸಂಜೆ ಉತ್ತರ ಪ್ರದೇಶ ರಾಜ್ಯದ ಫರೂಕಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಶಾಲಾ ಮಕ್ಕಳನ್ನು ಒತ್ತೆಯಾಗಿ ಇಟ್ಟುಕೊಂಡಿದ್ದಾನೆ. ಹುಟ್ಟು ಹಬ್ಬದ ಪಾರ್ಟಿಗೆ ಬಂದಿದ್ದ ಮಕ್ಕಳನ್ನು ಅಪಹರಣ ಮಾಡಲಾಗಿದೆ.
ಸ್ಥಳೀಯ ಜನರು ಮಕ್ಕಳನ್ನು ಕೂಡಿ ಹಾಕಿರುವ ಕೊಠಡಿಯ ಬಾಗಿಲು ತೆರೆಯಲು ಹೋದಾಗ ಒಳಗಿನಿಂದ ಆತ ಗುಂಡಿನ ದಾಳಿ ನಡೆಸಿದ್ದಾನೆ. ವ್ಯಕ್ತಿಯ ಕಾಲಿಗೆ ಗುಂಡು ತಗುಲಿದ್ದು, ಆತ ಗಾಯಗೊಂಡಿದ್ದಾನೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಕ್ಕಳನ್ನು ಒತ್ತೆಯಾಗಿ ಇಟ್ಟುಕೊಂಡ ವ್ಯಕ್ತಿಯನ್ನು ಸುಭಾಷ್ ಎಂದು ಗುರುತಿಸಲಾಗಿದೆ. ಸುಭಾಷ್ ಕೊಲೆ ಪ್ರಕರಣವೊಂದರ ಅಪರಾಧಿ. ತನ್ನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆತ ಚೀರಾಟ ನಡೆಸುತ್ತಿದ್ದಾನೆ. ಕಟ್ಟಡದಲ್ಲಿ ಇಬ್ಬರು ಮಹಿಳೆಯರು ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಲಕ್ನೋದ ಭಯೋತ್ಪಾದಕ ನಿಗ್ರಹ ದಳದ ಕಮಾಂಡೋಗಳು ಸ್ಥಳಕ್ಕೆ ಧಾವಿಸಿವೆ. ಭದ್ರತಾ ಪಡೆಗಳು ಆಗಮಿಸಿದಾಗಲೂ ಸುಭಾಷ್ ಗುಂಡಿನ ದಾಳಿ ನಡೆಸಿದ್ದಾನೆ. ಆತನ ಬಳಿಕ ಕಚ್ಚಾ ಬಾಂಬ್ ಇರಬಹುದು ಎಂದು ಸಹ ಶಂಕಿಸಲಾಗಿದೆ.
ಉತ್ತರ ಪ್ರದೇಶದ ಡಿಜಿಪಿ ಓಂ. ಪಿ. ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, "ಮಕ್ಕಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ" ಎಂದು ಹೇಳಿದ್ದಾರೆ.
ಸ್ಥಳದಲ್ಲಿ ಭಾರೀ ಜನರು ಜಮಾವಣೆಯಾಗಿದ್ದಾರೆ. ಒತ್ತೆಯಾಳುವಾಗಿರುವ ಮಕ್ಕಳ ಪೋಷಕರು ಸ್ಥಳದಲ್ಲಿ ಇದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದೆ.












Click it and Unblock the Notifications