ಬ್ರಿಟಿಷ್ ರಾಜಮನೆತನದ ಅರಮನೆಯಲ್ಲಿ ಮನೆಗೆಲಸದ ಹುದ್ದೆಗೆ 18.5 ಲಕ್ಷ ರೂ. ವೇತನ!
ಲಂಡನ್, ಅಕ್ಟೋಬರ್ 28: ಬ್ರಿಟನ್‌ನ ರಾಜಮನೆತನದ ಕುಟುಂಬವು ತನ್ನ ವಿಂಡ್ಸರ್ ಕ್ಯಾಸ್ಟಲ್ ಅರಮನೆಗೆ ಮನೆಗೆಲಸದವರೊಬ್ಬರ ಕೆಲಸಕ್ಕೆ ಸೂಕ್ತ ಕೆಲಸಗಾರರನ್ನು ಹುಡುಕುತ್ತಿದೆ. ಅಂದಹಾಗೆ ಈ ಕೆಲಸಕ್ಕೆ ರಾಜಮನೆತನ ಘೋಷಿಸಿರುವ ಸಂಬಳ ಭಾರತದ ರೂಪಾಯಿ ಮೌಲ್ಯದಲ್ಲಿ 18.5 ಲಕ್ಷ ರೂ.!
ರಾಯಲ್ ಹೌಸ್‌ಹೋಲ್ಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಉದ್ಯೋಗ ನೇಮಕಾತಿ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, ಲೆವೆಲ್ 2 ಅಪ್ರೆಂಟೈಸ್‌ಶಿಪ್ ಎಂದು ಕೆಲಸದ ಹುದ್ದೆಯನ್ನು ನಮೂದಿಸಲಾಗಿದೆ.
'ಈ ಉದ್ಯೋಗವು ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಲು ಅವಕಾಶ ನೀಡಲಿದೆ. ಅದ್ಭುತ ಸ್ಥಳದಲ್ಲಿ ಅಮೋಘ ಸೇವೆಯನ್ನು ಇದು ಬಯಸುತ್ತದೆ. ರಾಯಲ್ ಹೌಸ್‌ಹೋಲ್ಡ್‌ನಲ್ಲಿ ಅಪ್ರೆಂಟೈಸ್‌ಶಿಪ್ ಮಾಡುವುದು ವಿಭಿನ್ನವಾಗಿರಲಿದೆ' ಎಂದು ಅದು ಹೇಳಿದೆ.

ಆಯ್ಕೆಯಾದ ಅಭ್ಯರ್ಥಿಗೆ 13 ತಿಂಗಳು ಸೂಕ್ತ ತರಬೇತಿ ನೀಡಲಾಗುತ್ತದೆ. ಬಳಿಕವೇ ಅವರಿಗೆ ನಿಜವಾದ ಉದ್ಯೋಗ ನೀಡಲಾಗುತ್ತದೆ. ವಾರದಲ್ಲಿ ಐದು ದಿನ ಮಾತ್ರ ಕೆಲಸ ಇರಲಿದೆ. ಇದರ ಜತೆಗೆ ವಾಸದ ಸೌಲಭ್ಯ, ಹಾಗೂ ಎಲ್ಲ ಸಮಯಕ್ಕೂ ಊಟದ ವ್ಯವಸ್ಥೆ ಇರಲಿದೆ. ಅಭ್ಯರ್ಥಿಯ ಪ್ರಯಾಣ ಭತ್ಯೆ ಸೇರಿದಂತೆ ಇತರೆ ಒಟ್ಟಾರೆ ವೆಚ್ಚಗಳನ್ನು ಸಹ ಭರಿಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಯು ಈ ಒಂದು ವರ್ಷದಲ್ಲಿ ಬಕಿಂಗ್‌ಹ್ಯಾಮ್ ಪ್ಲೇಸ್ ಸೇರಿದಂತೆ ಇತರೆ ರಾಜಮನೆತನದ ನಿವಾಸಗಳಲ್ಲಿಯೂ ಕೆಲಸ ಮಾಡಬೇಕಾಗುತ್ತದೆ. ವಾರದ ರಜೆಗಳ ಜತೆಗೆ 33 ದಿನಗಳ ಇತರೆ ರಜೆಯ ಸೌಲಭ್ಯ ಸಹ ಇರಲಿದೆ.
ಅರ್ಜಿದಾರರು ಇಂಗ್ಲಿಷ್ ಹಾಗೂ ಗಣಿತದಲ್ಲಿ ಪದವಿ ಪಡೆದಿರಬೇಕು. ಆದರೆ ಆಯ್ಕೆಯಾಗುವ ಅಭ್ಯರ್ಥಿಗೆ ಈ ಅರ್ಹತೆ ಇಲ್ಲದೆ ಇದ್ದರೂ, ಆ ವಿದ್ಯಾರ್ಹತೆ ಪಡೆದುಕೊಳ್ಳಲು ರಾಜಮನೆತನದ ಕಾರ್ಯಕ್ರಮ ನೆರವು ನೀಡಲಿದೆ.
ಅರಮನೆಯ ಒಳಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಮುಖ ಜವಾಬ್ದಾರಿ. ಮನೆಗೆಲಸದ ವೃತ್ತಿಪರರ ತಂಡದಲ್ಲಿ ಸೇರಿಕೊಂಡು ಅರಮನೆಯ ಸ್ವಚ್ಛತೆ ನೋಡಿಕೊಳ್ಳಬೇಕು. 13 ತಿಂಗಳ ತರಬೇತಿ ಬಳಿಕ ಕಾಯಂ ಉದ್ಯೋಗಿಯಾಗುತ್ತಾನೆ. ನಿವೃತ್ತರಾದ ಬಳಿಕ ಪಿಂಚಣಿ ಕೂಡ ಸಿಗಲಿದೆ.












Click it and Unblock the Notifications