ಎಲ್ಲೆಲ್ಲೂ ಗುಲ್ಲು: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆ?
ಕೋಲ್ಕತ್ತಾ, ಮಾರ್ಚ್.06: ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸಲಿರುವ ಚುನಾವಣಾ ಪ್ರಚಾರದಲ್ಲಿ ಬಾಲಿವುಡ್ ನಟ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಮಿಥುನ್ ಚಕ್ರವರ್ತಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದರ ಮಧ್ಯೆ ಅವರು ಬಿಜೆಪಿಗೆ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿ ಎಲ್ಲೆಲ್ಲೂ ಗುಲ್ಲಾಗುತ್ತಿದೆ.
ಮಾರ್ಚ್ 06ರಂದು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಕಾಣಿಸಿಕೊಳ್ಳಲಿದ್ದಾರೆ.
"ನಾನು ಮಿಥುನ್ ಚಕ್ರವರ್ತಿ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರು ಶನಿವಾರ ಇಲ್ಲಿ ಆಗಮಿಸಲಿದ್ದಾರೆ. ಅವರ ಜೊತೆಗೆ ವಿಸ್ತೃತ ಚರ್ಚೆ ನಡೆಸಿದ ನಂತರವಷ್ಟೇ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ" ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ತಿಳಿಸಿದ್ದಾರೆ.

2 ವರ್ಷಗಳಲ್ಲೇ ರಾಜ್ಯಸಭೆಗೆ ರಾಜೀನಾಮೆ:
ತೃಣಮೂಲ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮಿಥುನ್ ಚಕ್ರವರ್ತಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿದ್ದರು. ಸುದ್ದಿ ವಾಹಿನಿ ಒಂದರಿಂದ ಸ್ಟಾರ್ ಪ್ರಚಾರಕರಾದ ಮಿಥುನ್ ಚಕ್ರವರ್ತಿ ಅಂದಿನ ಸಮಯದಲ್ಲೇ 1.2 ಕೋಟಿ ರೂಪಾಯಿ ಪಡೆದುಕೊಂಡಿದ್ದರು ಎಂಬ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಹ ಪ್ರಶ್ನೆ ಮಾಡಿದ್ದರು. ಈ ಹಣವನ್ನು ತನಿಖಾ ಸಂಸ್ಥೆಗೆ ಹಿಂತಿರುಗಿಸಿದ ಮಿಥುನ್ ಚಕ್ರವರ್ತಿ ಅವರು ಅನಾರೋಗ್ಯದ ಕಾರಣವನ್ನು ನೀಡಿ ರಾಜೀನಾಮೆ ಸಲ್ಲಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ:
ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಿಸಿತು. ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಮೇ.02ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.












Click it and Unblock the Notifications