ಕಾನೂನಿನ ಭಯವೇ ಇಲ್ಲ! ಗನ್ ಹಿಡಿದು ಪ್ರಚಾರ ಮಾಡಿದ ಮಮತಾ ಬೆಂಬಲಿಗ
ಕೋಲ್ಕತಾ, ಏಪ್ರಿಲ್ 24: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬ ರೋಡ್ ಶೋ ಒಂದರಲ್ಲಿ ಗನ್ ಹಿಡಿದುಕೊಂಡು ಪ್ರಚಾರಕ್ಕೆ ತೆರಳಿದ ವಿಡಿಯೋ ವೈರಲ್ ಆಗಿದೆ.
ಬಿರ್ಭುಮ್ ಲೋಕಸಭೆ ಕ್ಷೇತ್ರದಲ್ಲಿ ನಡೆದ ರೋಡ್ ಶೋ ಸಂದರ್ಭದಲ್ಲಿ ಟಿಎಂಸಿ ಕಾರ್ಯಕರ್ತ ಯಾವ ಅಂಜಿಕೆಯೂ ಇಲ್ಲದೆ ರಾಜೋರೋಷವಾಗಿ ಗನ್ ತೋರಿಸುತ್ತಾ ಸಾಗಿದ್ದಾನೆ.
ಸುಮಾರು 20೦ ಟಿಎಂಸಿ ಕಾರ್ಯಕರ್ತರು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಸವಾರ ಗನ್ ಹಿಡಿದುಕೊಂಡು ಎತ್ತಿ ತೋರಿಸುವ ಚಿತ್ರ ಮತ್ತು ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಬಿರ್ಭುಮ್ ಕ್ಷೇತ್ರದಲ್ಲಿ ಟಿಎಂಸಿಯ ಹಾಲಿ ಸಂಸದ ಸತಾಬ್ದಿ ರಾಯ್ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿ ದೂದ್‌ಕುಮಾರ್ ಮಂಡಲ್ ಕಣಕ್ಕಿಳಿದಿದ್ದಾರೆ.
ವರದಿಗಳ ಪ್ರಕಾರ ಟಿಎಂಸಿಯ ಪ್ರಾದೇಶಿಕ ಅಧ್ಯಕ್ಷ ಪ್ರಶಾಂತೋ ಮೊಂಡಲ್ ಸೇರಿದಂತೆ ಮೂವರು ನಾಯಕರು ಈ ಜಾಥಾ ಆಯೋಜಿಸಿದ್ದರು. ಈ ಜಾಥಾದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಟಿಎಂಸಿ ಬಾವುಟ ಹಿಡಿದುಕೊಂಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಮಾಲ್ದಾ ಉತ್ತರ ಲೋಕಸಭೆ ಕ್ಷೇತ್ರದ ರತುವಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ಬೂತ್ ಒಂದರಲ್ಲಿ ನಕಲಿ ಮತದಾನ ನಡೆಸಿದ ಆರೋಪಗಳು ಸಹ ಕೇಳಿಬಂದಿವೆ.












Click it and Unblock the Notifications