ಅಂಕೋಲ; ಬಾವಿಯಲ್ಲಿ ಪತ್ತೆಯಾಯ್ತು ಪೆಟ್ರೋಲ್
ಅಂಕೋಲಾ, ಡಿಸೆಂಬರ್ 14: ಪಟ್ಟಣದ ಮನೆಯೊಂದರ ಬಾವಿಯಲ್ಲಿ ಪೆಟ್ರೋಲ್ ಪತ್ತೆಯಾಗಿದ್ದು, ಈ ಸುದ್ದಿ ಹಬ್ಬುತ್ತಿದ್ದಂತೆ ಬಾವಿಯನ್ನು ನೋಡಲು ಜನರು ದೌಡಾಯಿಸಿದ್ದಾರೆ.
ಕಾರವಾರ ರಸ್ತೆಗೆ ಹೊಂದಿಕೊಂಡಿರುವ ನಾಗವೇಣಿ ನಾಗರಾಜ ಆಚಾರಿಯವರ ಮನೆಯ ಕುಡಿಯುವ ನೀರಿನ ಬಾವಿಗೆ ಸಮೀಪದ ಬಂಕ್ ನಿಂದಾಗಿ ಪೆಟ್ರೋಲ್ ಬೆರೆತಿದೆ. ಪೆಟ್ರೋಲ್ ವಾಸನೆ ಬರುತ್ತಿರುವುದನ್ನು ಗಮನಿಸಿದ ಮನೆಯವರು ಬಾವಿ ಇಣುಕಿ ನೋಡಿದಾಗ ನೀರಿನ ಮೇಲ್ಪದರಲ್ಲಿ ಪೆಟ್ರೋಲ್ ಶೇಖರಣೆಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಅವರು ಮುಖ್ಯಾಧಿಕಾರಿ ಬಿ.ಪ್ರಹ್ಲಾದ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಬಿ.ಪ್ರಹ್ಲಾದ್, ಮನೆಯ ಎದುರಿನಲ್ಲಿರುವ ಪೆಟ್ರೋಲ್ ಬಂಕ್ ನವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸ್ಥಳಕ್ಕೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ ನಾಯಕ ಭೇಟಿ ನೀಡಿ ಪರಿಶೀಲಿಸಿ, ಪಕ್ಕದ ಪೆಟ್ರೋಲ್ ಬಂಕ್ ನಲ್ಲಿನ ಟ್ಯಾಂಕ್ ಸೋರಿಕೆಯಾದ ಹಿನ್ನೆಲೆಯಲ್ಲಿ ಭೂಮಿಯಲ್ಲಿ ಪೆಟ್ರೋಲ್ ಇಂಗಿ ಬಾವಿಯನ್ನು ಸೇರಿಕೊಂಡಿದೆ. ಬಾವಿಯ ನೀರನ್ನು ಖಾಲಿ ಮಾಡಿಸಿ, ಕುಡಿಯುವ ನೀರಿನ ಬಳಕೆಗಾಗಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಬಂಕ್ ನವರು ವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮುಖ್ಯಾಧಿಕಾರಿ ಅಗ್ನಿಶಾಮಕ ದಳಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ರವಾನಿಸಿದ್ದಾರೆ.












Click it and Unblock the Notifications