ನಿಶ್ಚಿಂತವಾಗಿದ್ದ ಉತ್ತರ ಕನ್ನಡದಲ್ಲೀಗ ಮತ್ತೆ ಢವಢವ; ಭಟ್ಕಳ ಯುವತಿಗೆ ಸೋಂಕು
ಭಟ್ಕಳ, ಮೇ 05: ಕಳೆದ 20 ದಿನಗಳಿಂದ ಸಕ್ರಿಯ ಕೊರೊನಾ ಸೋಂಕಿತ ಪ್ರಕರಣಗಳಿಲ್ಲದೆ ಸಹಜ ಸ್ಥಿತಿಯತ್ತ ಮರಳುತ್ತಿದ್ದ ಜಿಲ್ಲೆಯ ಜನತೆ ಮತ್ತೆ ಆತಂಕಿತರಾಗುವ ಸುದ್ದಿಯೊಂದು ಇಲ್ಲಿದೆ.
ಪಟ್ಟಣದ 18 ವರ್ಷದ ಯುವತಿಯೊಬ್ಬಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಕೊರೊನಾ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಈಕೆ, ವೈದ್ಯರ ಶಿಫಾರಸ್ಸಿನ ಮೇಲೆ ಹೋಮ್ ಕ್ವಾರಂಟೈನ್ ಆಗಿದ್ದಳು. ಪ್ರಯೋಗಾಲಯಕ್ಕೆ ಕಳುಹಿಸಿದ್ದ, ಇಂದು ಬಂದ ಗಂಟಲಿನ ದ್ರವದ ಮಾದರಿಯ ವರದಿಯಲ್ಲಿ ಪಾಸಿಟಿವ್ ಬಂದಿದೆ.

ಸೋಂಕಿತ ಯುವತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸೋಂಕು ತಗುಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಸೋಂಕಿತ ಯುವತಿಯ ಅಕ್ಕ, ಬಾವ ತಮ್ಮ ಮಗುವಿಗೆ ಅನಾರೋಗ್ಯದ ಕಾರಣ ಪಾಸ್ ಪಡೆದು ಮಂಗಳೂರಿಗೆ ಏ.19ಕ್ಕೆ ತೆರಳಿದ್ದರು. ಪರಿಚಯಸ್ಥರೊಬ್ಬರ ಮನೆಯಲ್ಲಿ ಉಳಿದು, ಏ.20ರಂದು ಮಗುವಿಗೆ ಚಿಕಿತ್ಸೆ ಕೊಡಿಸಿ ಭಟ್ಕಳಕ್ಕೆ ವಾಪಸ್ಸಾಗಿದ್ದರು. ಹೀಗಾಗಿ ಇವರ ಸಂಪರ್ಕದಲ್ಲಿದ್ದ ಯುವತಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯುವತಿಯ ಮನೆಯಲ್ಲಿದ್ದ ಎಂಟೂ ಮಂದಿಯ ಗಂಟಲಿನ ದ್ರವವನ್ನು ಇದೀಗ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.












Click it and Unblock the Notifications