Breaking: ಸೀಬರ್ಡ್ ಕಾಲೋನಿಯಲ್ಲಿ ಸಿಲಿಂಡರ್ ಬ್ಲಾಸ್ಟ್, ತಪ್ಪಿದ ಭಾರಿ ಅನಾಹುತ
ಕಾರವಾರ ಅಕ್ಟೋಬರ್ 11: ಕಾರ್ಮಿಕರ ವಸತಿ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡು ಹಲವು ಕಾರ್ಮಿಕರ ಶೆಡ್‌ಗಳು ಸುಟ್ಟು ಜಖಂಗೊಂಡಿರುವ ಘಟನೆ ಕಾರವಾರದ ಮುದಗಾ ಲೇಬರ್ ಕಾಲೋನಿಯಲ್ಲಿ ಇಂದು ನಡೆದಿದೆ.
ನೌಕಾನೆಲೆ ಕಟ್ಟಡ ಕಾಮಗಾರಿ ಸಂಬಂಧ ಸೀಬರ್ಡ್ ಕಾಲೋನಿಯಲ್ಲಿ ಕಾರ್ಮಿಕರ ವಾಸಕ್ಕಾಗಿ ಶೆಡ್ ಹಾಕಿಕೊಡಲಾಗಿತ್ತು. ಅಸ್ಸಾಂ, ಒಡಿಶಾ ಸೇರಿದಂತೆ ಹೊರ ರಾಜ್ಯದ ನೂರಕ್ಕೂ ಅಧಿಕ ಕಾರ್ಮಿಕರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಶೆಡ್‌ಗಳಲ್ಲಿ ಬುಧವಾರ ಬೆಳಗ್ಗೆ ಅನಿಲ ಸೋರಿಕೆಯಾಗಿ ಒಂದು ದೊಡ್ಡ ಸಿಲಿಂಡರ್, ಎರಡು ಸಣ್ಣ ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎನ್ನಲಾಗಿದೆ.
ಶೆಡ್‌ಗಳಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ಸಿಲಿಂಡರ್ ಸ್ಫೋಟ ಸಂಭವಿಸುತ್ತಿದ್ದಂತೆ ಘಟನಾ ಸ್ಥಳದ ಸುತ್ತಮುತ್ತಲಿನ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಲು ದಿಕ್ಕಾಪಾಲಾಗಿ ಓಡಿದ್ದಾರೆ.

ನೋಡ ನೋಡುತ್ತಿದ್ದಂತೆ ಶೆಡ್‌ಗಳು ಸಂಪೂರ್ಣ ಹೊತ್ತಿ ಉರಿದಿದ್ದು, ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದ್ದಾರೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಕಾರ್ಮಿಕ ಶೆಡ್‌ಗಳು ಸಂಪೂರ್ಣ ನೆಲಸಮವಾಗಿದೆ. ಇನ್ನೂ ಕೆಲ ಶೆಡ್‌ಗಳು ಭಾಗಶಃ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಕಾರ್ಮಿಕರ ಶೆಡ್‌ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ. ಅಲ್ಲದೆ ಶೆಡ್‌ನೊಳಗಿದ್ದ ಬಟ್ಟೆ, ಪಾತ್ರೆ, ಅಡಿಗೆ ಸಾಮಗ್ರಿ, 25ಕ್ಕೂ ಅಧಿಕ ಮೊಬೈಲ್‌ಗಳು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಸೀಬರ್ಡ್ ಕಾಲೋನಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಿಲಿಂಡರ್ ಸ್ಫೋಟ ಘಟನೆಯಿಂದ ಅಸ್ಸಾಂ, ಒಡಿಶಾ ಸೇರಿದಂತೆ ಹೊರ ರಾಜ್ಯದಿಂದ ಬಂದ ಕಾರ್ಮಿಕರು ಸೂರು ಕಳೆದುಕೊಂಡಿದ್ದು, ತಮ್ಮ ದಿನ ಬಳಕೆಯ ವಸ್ತುಗಳು ಬೆಂಕಿಗಾಹುತಿಯಾಗಿರುವುದಕ್ಕೆ ಕಂಗಾಲಾಗಿದ್ದಾರೆ. ಸಿಲಿಂಡರ್ ಸ್ಪೋಟ ದುರಂತ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications