ಕಾಡಿನಲ್ಲಿದ್ದ 6.70 ಲಕ್ಷ ಮೌಲ್ಯದ ಗೋವಾ ಮದ್ಯ ವಶಕ್ಕೆ!
ಕಾರವಾರ, ಜನವರಿ 19: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಅರಣ್ಯದಲ್ಲಿ ಅಡಗಿಸಿಡಲಾಗಿದ್ದ ಗೋವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದುಕೊಂಡ ಮದ್ಯದ ಮೌಲ್ಯ ಸುಮಾರು 6,70,800 ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿರುವ ಚೆಕ್ ಪೋಸ್ಟ್ ಸಮೀಪದ ಅರಣ್ಯದಲ್ಲಿ ಅಕ್ರಮವಾಗಿ ಮದ್ಯವನ್ನು ಅಡಗಿಸಿ ಇಡಲಾಗಿತ್ತು. ಗೋವಾ ರಾಜ್ಯದ ಪರವಾನಗಿ ಹೊಂದಿದ್ದ ಮದ್ಯಗಳನ್ನು ದಾಸ್ತಾನು ಮಾಡಿರುವ ಬಗ್ಗೆ ಖಚಿತವಾದ ಮಾಹಿತಿಯನ್ನು ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳಿ ದಾಳಿ ಮಾಡಿದ್ದಾರೆ.
ಒಟ್ಟು 1,423 ಲೀಟರ್ ಗೋವಾ ಮದ್ಯ ಹಾಗೂ 228 ಲೀಟರ್ ಗೋವಾ ಬಿಯರ್ ಅನ್ನು ಕಾಡಿನಲ್ಲಿ ಅಡಗಿಸಿಡಲಾಗಿತ್ತು. ಗೋವಾದಲ್ಲಿ ಮದ್ಯದ ದರ ಕಡಿಮೆ ಇದ್ದು, ಅದನ್ನು ಅಕ್ರಮವಾಗಿ ಕಾರವಾರ ಸೇರಿದಂತೆ ಗಡಿ ಭಾಗಗಳಿಗೆ ತಂದು ಕರ್ನಾಟಕದ ದರದಲ್ಲಿ ಮಾರಾಟ ಮಾಡಿ ಹಣ ಗಳಿಸುವ ದಂಧೆ ನಡೆಯುತ್ತಿದೆ.

ಅಕ್ರಮವಾಗಿ ಗೋವಾದಿಂದ ಮದ್ಯವನ್ನು ಕರ್ನಾಟಕದ ಗಡಿಯೊಳಗೆ ತಂದು ದಾಸ್ತಾನು ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications