ಗೋಕರ್ಣ: ಪ್ರಾಚೀನ ಗಣಪತಿ ಮೂರ್ತಿಗೆ ಬಂದಿದೆ ಕುತ್ತು, ಈ ದೇವಸ್ಥಾನದಲ್ಲಿನ್ನು ಸ್ಪರ್ಶ ದರ್ಶನವಿಲ್ಲ
ಗೋಕರ್ಣ, ಜುಲೈ 24: ಪೌರಾಣಿಕ ಪ್ರಸಿದ್ಧ ಇಲ್ಲಿನ ಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ಪೂಜಾ ಸೇವೆ ಬಂದ್ ಆಗಲಿದೆ. ಮಹಾಗಣಪತಿ ದೇವಸ್ಥಾನದ ಪ್ರಾಚೀನ ಶಿಲಾಮೂರ್ತಿ ಸವಕಳಿ ಹಿನ್ನೆಲೆಯಲ್ಲಿ ಸಾರ್ವಜನಿಕರು, ಮಂದಿರದ ಅರ್ಚಕರು ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ಅಂಗೀಕರಿಸಲಾಯಿತು.
ಕೆಲವು ವರ್ಷಗಳಿಂದ ಈ ವಿಶೇಷವಾದ ಗಣೇಶ ಮೂರ್ತಿ ವಿಗ್ರಹವು ಸವಕಳಿ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ಅದರಲ್ಲಿಯೂ ಬರ ಬರುತ್ತಾ ಭುಜ, ಕೈ ಹಾಗೂ ಎದೆ ಭಾಗದಲ್ಲಿ ಹೆಚ್ಚು ಸಕಳಿಯಾದ ಕಾರಣ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ. ಅಭಿಷೇಕ, ಪೂಜೆ ಜೊತೆಗೆ ಜರುಗು ಕೊಟ್ಟೆ ಕಣಜ, ಸಕ್ಕರೆ ಕಣಜ ಸೇವೆಗಳೂ ಬಂದ್ ಆಗಲಿವೆ. ಕೇವಲ ಸಾಮಾನ್ಯ ಭಕ್ತರಿಗೆ ಮಾತ್ರವಲ್ಲ, ಗಣ್ಯ ವ್ಯಕ್ತಿಗಳಿಗೂ ಈ ಸೇವೆಗಳನ್ನು ನಿಷೇಧಿಸಲಾಗಿದೆ.

ಕಾರವಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಳವಾರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಪುರಾತನ ದೇವಾಲಯದ ಮಹತ್ವ ಉಳಿಸಿ ಕೊಳ್ಳಲು ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ. ಗಣೇಶನ ಹಬ್ಬ ಸಮೀಪಿಸುತ್ತಿದ್ದು, ಈ ವಿಶೇಷ ಸಂದರ್ಭ ಹಾಗೂ ಮುಂಬರುವ ಸಂಕಷ್ಠಿಯಲ್ಲಿಯೂ ಈ ಸೇವೆಗಳಿಗೆ ಅವಕಾಶ ಇರುವುದಿಲ್ಲ.
ಸವಕಳಿ ಆಗಲು ಕಾರಣ ಏನು?
ಇಲ್ಲಿಯ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ 'ಆತ್ಮಲಿಂಗ' ದರ್ಶನ ಪಡೆಯಲು ಬರುವ ಭಕ್ತರು ಮೊದಲು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸಹಜ. ಗಣಪನಿಗೆ ಎಲ್ಲ ಕಾರ್ಯಗಳಿಗೂ ಮುನ್ನ ವಂದಿಸುವಂತೆ ಈ ಪೌರಾಣಿಕ ದ್ವಿಭುಜ ಗಣಪತಿಗೆ ಸ್ಪರ್ಶಿಸಿಯೇ ಪೂಜೆ ಸಲ್ಲಿಸುತ್ತಾರೆ.
ನಿತ್ಯವೂ ಸಾವಿರಾರು ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ ಪೂಜಿಸುವುದಿರಂದ ಪ್ರಾಚೀನ ಕಾಲದ ಗಣಪತಿಯ ಶಿಲಾ ಮೂರ್ತಿ ಕೈ, ಭುಜ ಹಾಗೂ ಎದೆ ಭಾಗವು ಸವಕಳಿಯಾಗುತ್ತಿರುವುದು ಸ್ಫಷ್ಟವಾಗಿ ಗೋಚರಿಸುತ್ತಿತ್ತು. ಪುರಾತನ ಮೂರ್ತಿಯ ಸಂರಕ್ಷಣೆಯ ಉದ್ದೇಶದಿಂದ ಭಕ್ತರ ಭಾವನೆಗೆ ನೋವನ್ನುಂಟು ಮಾಡುವ ನಿರ್ಧಾರ ತೆಗೆದುಕೊಳ್ಳಲು ದತ್ತಿ ಇಲಾಖೆ ನಿರ್ಧರಿಸಿದೆ. ಆ ಆದೇಶ ತಕ್ಷಣದಿಂದಲೇ ಜಾರಿಗೊಳ್ಳಲಿದೆ.
ಈ ದೇವಾಲಯದ ವಿಶೇಷತೆ ಏನು?
ಮೂರು ಅಥವಾ ನಾಲ್ಕನೇ ಶತಮಾನದಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಕದಂಬರ ಕಾಲದ ಈ ಮೂರ್ತಿಯೂ ನಿಂತ ಭಂಗಿಯಲ್ಲಿದ್ದು, ಎರಡು ಭುಜಗಳಿವೆ. ಗಣಪತಿಗೆ ಅರ್ಧವೃತ್ತಾಕಾರದ ನಡುಭಾಗವಿದೆ. ಶಿವನ ಆತ್ಮಲಿಂಗ ಗೋಕರ್ಣದಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಸಾಕ್ಷಾತ್ ಪರಮೇಶ್ವರನಿಂದ ರಾವಣ ಆತ್ಮಲಿಂಗ ಪಡೆದು, ಲಂಕೆಗೆ ಒಯ್ಯುತ್ತಿರುವಾಗ ಗೋಕರ್ಣಕ್ಕೆ ಬರುತ್ತಾನೆ.
ರಾವಣನಿಗೆ ಅದ್ಭುತ ಶಕ್ತಿ ಸಿಕ್ಕಿಬಿಟ್ಟರೆ ಅನಾಹುತ ಖಚಿತವೆಂದು ಅರಿತ ದೇವತೆಗಳು ಹೇಗಾದರೂ ಮಾಡಿ ಆ ಆತ್ಮಲಿಂಗವನ್ನು ಅಲ್ಲಿಯೇ ಪ್ರತಿಷ್ಠಾಪಿಸುವಂತೆ ಮಾಡಿದ್ದರಿಂದ ಈ ಪುಣ್ಯಕ್ಷೇತ್ರದಲ್ಲಿಯೇ ಆತ್ಮಲಿಂಗ ಪ್ರತಿಷ್ಠಾಪನೆಯಾಗಿದೆ. ಈ ಮಹಾನ್ ಕಾರ್ಯಕ್ಕೆ ಖುದ್ದು ಗಣಪತಿಯೇ ಬ್ರಹ್ಮಚಾರಿ ರೂಪದಲ್ಲಿ ಬಂದಿದ್ದ ಎಂಬ ಪ್ರತೀತಿ ಇದೆ. ಅದಕ್ಕೆ ಸಿಟ್ಟಾದ ರಾವಣ ಗಣಪತಿ ತಲೆಗೊಂದು ಹೊಡೆದಿದ್ದನಂತೆ. ಆ ಕುಳಿ ಈ ಗಣಪತಿ ತಲೆ ಮೇಲೆ ಕಾಣಬಹುದು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ ಈ ಆತ್ಮಲಿಂಗ ಇರುವ ಗೋಕರ್ಣ. ಕುಮಟಾದಿಂದ 33 ಕಿಲೋ ಮೀಟರ್ ಹಾಗೂ ಅಂಕೋಲಾದಿಂದ 27 ಕಿಲೋ ಮೀಟರ್ ದೂರದಲ್ಲಿದೆ. ಈ ಕ್ಷೇತ್ರವನ್ನು ಶಿವ ಹಾಗೂ ವಿಷ್ಣುವಿನ ನಗರವೆಂದೂ ಕರೆಯಲಾಗುತ್ತದೆ. ಇಲ್ಲಿರುವ ಮಹಾಬಲೇಶ್ವರ ದೇವಾಲಯಕ್ಕೆ 1,500 ವರ್ಷಗಳ ಇತಿಹಾಸವಿದೆ. ಆತ್ಮಲಿಂಗವಿರುವ ಈ ಕ್ಷೇತ್ರಕ್ಕೆ ದಕ್ಷಿಣದ ಕಾಶಿ ಎಂದೇ ಕರೆಯುತ್ತಾರೆ. ಕಾಶಿಯ ವಿಶ್ವನಾಥನಂತೆ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಆರಡಿ ಎತ್ತರದ ಶಿವಲಿಂಗ ಇರೋ ಈ ದೇವಸ್ಥಾನ ನಿರ್ಮಾಣಕ್ಕೆ ಬಿಳಿ ಗ್ರಾನೈಟ್ ಬಳಸಲಾಗಿದೆ. ಮಹಾಭಾರತ, ರಾಮಾಯಣದಲ್ಲಿಯೂ ಉಲ್ಲೇಖ ಇರುವ ಈ ದೇವಸ್ಥಾನಕ್ಕೆ ಸಮೀಪದ ಕಡಲ ತೀರದಲ್ಲಿ ಸ್ನಾನ ಮಾಡಿ, ಮಹಾಗಣಪತಿ ದೇವಸ್ಥಾನದಲ್ಲಿ ದರ್ಶನ ಪಡೆದು, ಆತ್ಮಲಿಂಗದ ದರ್ಶನ ಪಡೆಯಲಾಗುತ್ತದೆ.


Click it and Unblock the Notifications
