ಮೊಮ್ಮಕ್ಕಳೊಂದಿಗೆ ಬಂದು ಮತ ಚಲಾಯಿಸಿದ ಅಸ್ನೋಟಿಯ ಶತಾಯುಷಿ
ಕಾರವಾರ, ಏಪ್ರಿಲ್ 24:ಶತಾಯುಷಿ ಮತದಾರ ತಾಲೂಕಿನ ಅಸ್ನೋಟಿಯ ಮಾಜೇವಾಡದ ನಿವಾಸಿ, 101ರ ಹರೆಯದ ಗಣಪತಿ ಶಂಬಾ ಸಾಳುಂಕೆ ಅವರು ಮತ ಚಲಾವಣೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಅವರು ಒಮ್ಮೆಯೂ ತಪ್ಪಿಸದೇ ಮತದಾನ ಮಾಡುತ್ತಿದ್ದಾರೆ. ಒಟ್ಟು 16 ಲೋಕಸಭಾ ಚುನಾವಣೆಗಳಲ್ಲಿ ಅವರು ಹಕ್ಕು ಚಲಾಯಿಸಿದ್ದಾರೆ. ಗಣಪತಿ ಅವರು ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ನಿವೃತ್ತರಾದವರು.
ಶತಾಯುಷಿಯಾದರೂ ವಯಸ್ಸು ದೇಹಕ್ಕಾಗಿದೆಯೇ ಹೊರತು, ತಮ್ಮ ಮನಸ್ಸಿಗೆ ಅಲ್ಲ ಎನ್ನುವ ಮೂಲಕ ಉತ್ಸಾಹದಿಂದಲೇ ಮಕ್ಕಳು-ಮೊಮ್ಮಕ್ಕಳೊಂದಿಗೆ ಮತಗಟ್ಟೆಗೆ ಬಂದು ಅವರು ಮತ ಚಲಾಯಿಸಿದರು. 1918 ರ ಜುಲೈ 18ರಂದು ಜನಿಸಿದ್ದ ಗಣಪತಿ ಸಾಳುಂಕೆ, ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ರಾಜ್ಯದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾದ ಬಳಿಕ ಕಾರವಾರದ ಅಸ್ನೋಟಿ ಬಳಿ ಮಕ್ಕಳ ಜೊತೆ ನೆಲೆಸಿದ್ದಾರೆ.

'ನಾನು ಆರಂಭದಲ್ಲಿ ಮಾಡಿದ್ದ ಮತದಾನ ಸರಿಯಾಗಿ ನೆನಪಿಲ್ಲ. ಆದರೆ ಮತದಾನದ ಚೀಟಿ ಸಿಕ್ಕ ಬಳಿಕ ತಪ್ಪದೇ ಮತದಾನ ಮಾಡಿದ್ದೇನೆ. ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆಯೂ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದೆ. ಈ ಚುನಾವಣೆಗೂ ತಪ್ಪದೇ ಮತದಾನ ಮಾಡಿದ್ದೇನೆ' ಎಂದು ಈ ವೇಳೆ ಅವರು ನುಡಿದರು. ಗಣಪತಿ ಅವರ ಆಸಕ್ತಿ ಎಲ್ಲರನ್ನು ಚಕಿತಗೊಳಿಸಿದ್ದಂತೂ ಸುಳ್ಳಲ್ಲ.












Click it and Unblock the Notifications