ಐಟಿ-ಬಿಟಿ ಉದ್ಯೋಗಿಗಳಿಗೆ ಕೆಲಸದ ಅವಧಿ 14 ಗಂಟೆಗೆ ವಿಸ್ತರಣೆ: ಉದ್ಯಮಿಗಳು ಹೇಳೋದೇನು?
ಬೆಂಗಳೂರು, ಅಕ್ಟೋಬರ್, 06: ಈಗಾಗಲೇ ಈ ಹಿಂದೆ ದಿನಕ್ಕೆ ಉದ್ಯೋಗಿಗಳು ಕಂಪನಿಗಳಲ್ಲಿ 14 ಗಂಟೆ ಕೆಲಸ ಮಾಡಬೇಕೆಂದು ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿದ್ದರು. ಆಗ ಇದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಮತ್ತೆ ಉದ್ಯಮಿಗಳು ಇದೇ ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟಿದ್ದಾರೆ. ಹಾಗಾದರೆ, ಸರ್ಕಾರದ ಮುಂದಿನ ನಡೆ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಕೆಲಸದ ಅವಧಿ 14 ಗಂಟೆ ವಿಸ್ತರಣೆ ಮಾಡಬೇಕು ಎಂದು ಉದ್ಯಮಿಗಳು ರಾಜ್ಯ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದ್ದರು. ಈ ಹಿನ್ನೆಲೆ ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ.

ಕೆಲಸದ ಅವಧಿಯನ್ನು 14 ಗಂಟೆಗೆ ವಿಸ್ತರಣೆ ಅನುಕೂಲ ಆಗುವಂತೆ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ-1961ಕ್ಕೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಸರ್ಕಾರದ ಸೂಚನೆಯಂತೆ ಕಾರ್ಮಿಕ ಇಲಾಖೆ ಐಟಿ-ಬಿಟಿ ಕಂಪನಿಗಳಷ್ಟೇ ಅಲ್ಲ, ಖಾಸಗಿ ಸಂಸ್ಥೆಗಳ ಕಾರ್ಮಿಕ ಸಂಘಟನೆಗಳು, ಉದ್ಯೋಗದಾತರ ಅಭಿಪ್ರಾಯವನ್ನು ಕೇಳಲು ತೀರ್ಮಾನ ಮಾಡಲಾಗಿದೆ.
ಈಗಾಗಲೇ ಕಾರ್ಮಿಕ ಸಂಘಟನೆಗಳಿಂದ ಕೆಲಸದ ಅವಧಿ ಹೆಚ್ಚಳ ಮಾಡುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವುದೇ ಕಾರ್ಮಿಕ ವಿರೋಧಿ ನೀತಿಯಾಗಿದೆ. ಅದನ್ನು ಮತ್ತೆ 2 ಗಂಟೆ ಹೆಚ್ಚಳ ಮಾಡಿದ್ದಲ್ಲಿ ಜೀವ ವಿರೋಧಿ ನೀತಿಯಾಗುತ್ತದೆ.
ಹೆಚ್ಚುತ್ತಿರುವ ಕೆಲಸದ ಅವಧಿ, ಒತ್ತಡ, ದೈಹಿಕ ಚಟುವಟಿಕೆ ಕೊರತೆಯಿಂದ ಯುವ ಜನಾಂಗ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಕೆಲಸದ ಅವಧಿ ಹೆಚ್ಚಿದೆ ಮಾಡಿದರೆ, ಮತ್ತಷ್ಟು ವಿಪರೀತ ಒತ್ತಡಕ್ಕೆ ಉದ್ಯೋಗಿಗಳು ಸಿಲುಕುತ್ತಾರೆ ಎಂದು ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ವಾರದಲ್ಲಿ ನಾಲ್ಕು ದಿನ ಅಷ್ಟೇ ಉದ್ಯೋಗಿಗಳು ಕಾರ್ಯನಿರ್ವಹಿಸಿ ಉಳಿದ ಮೂರು ದಿನ ರಜೆಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಬಹುದು. ಇದರಿಂದ ಉದ್ಯೋಗಿಗಳಿಗೆ ಪ್ರಯಾಣ ವೆಚ್ಚ, ಸಮಯ ಉಳಿತಾಯ ಆಗುತ್ತದೆ ಎಂಬುದು ಉದ್ಯಮಿಗಳ ಅಭಿಪ್ರಾಯ ಆಗಿದೆ.
ಕೆಲಸದ ಅವಧಿ ವಿಸ್ತರಣೆ ಮಾಡುವ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಕಿದ್ವಾಯಿ ಆಸ್ಪತ್ರೆ ಸಮೀಪದ ಸಂಭ್ರಮ ಸಭಾಂಗಣದಲ್ಲಿ ಅಕ್ಟೋಬರ್ 8ರಂದು ಕಾನೂನು ಅರಿವು ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಕೆಲಸದ ಅವಧಿ ವಿಸ್ತರಣೆ ಸಂಬಂಧ ಅಭಿಪ್ರಾಯ ಸಂಗ್ರಹಿಸಿ ಇದನ್ನು ಆಧರಿಸಿ ಸರ್ಕಾರ ನಿಯಮಾವಳಿ ರೂಪಿಸಲಿದೆ ಎನ್ನಲಾಗಿದೆ.












Click it and Unblock the Notifications