ಒಂದೇ ಹುದ್ದೆಗೆ ಎರಡು ಪರೀಕ್ಷೆ ಏಕೆ? ಕೆಇಎ ಹೊಸ ನಿಯಮದಿಂದ ಅಭ್ಯರ್ಥಿಗಳಿಗೆ ಗೊಂದಲ, ನೇಮಕಾತಿಯಲ್ಲಿ ವಿಳಂಬ
ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ವಲ್ಪ ಚುರುಕುಗೊಂಡಿದದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿಯನ್ನ ಮಾಡಲಾಗುತ್ತಿದೆ. ಆದರೆ, ನೇಮಕಾತಿ ಪರೀಕ್ಷೆ ನಡೆಸುವ ವಿಧಾನದ ಬಗ್ಗೆ ಈಗ ಅಭ್ಯರ್ಥಿಗಳಲ್ಲಿ ಹೊಸ ಗೊಂದಲ ಮತ್ತು ಅಸಮಾಧಾನ ಉಂಟುಮಾಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದೇ ಹುದ್ದೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದು ದಿನ ಮತ್ತು ಇತರೆ ಜಿಲ್ಲೆಗಳಿಗೆ ಮತ್ತೊಂದು ದಿನ ಪ್ರತ್ಯೇಕ ಪರೀಕ್ಷೆ ನಡೆಸುತ್ತಿರುವುದೇ ಈ ಎಲ್ಲ ಚರ್ಚೆಗಳಿಗೆ ಮುಖ್ಯ ಕಾರಣವಾಗಿದೆ ನೋಡಿ.
ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿ (VAO), ವಸತಿ ಶಾಲೆಗಳ ಶಿಕ್ಷಕರು ಹಾಗೂ ಭೂಮಾಪಕರ ನೇಮಕಾತಿಗೆ ಇದೇ ನಿಯಮವನ್ನ ಪಾಲಿಸಲಾಗ್ತಾಯಿದೆ. ಈ ಹಿಂದೆ ಕೇವಲ ಪೊಲೀಸ್ ಇಲಾಖೆಯ ನೇಮಕಾತಿಗೆ ಸೀಮಿತವಾಗಿದ್ದ ಈ ಪದ್ಧತಿಯನ್ನ ಈಗ ಎಲ್ಲ ಇಲಾಖೆಗಳಿಗೂ ವಿಸ್ತರಿಸಲಾಗಿದೆ.

ಕಲ್ಯಾಣ ಕರ್ನಾಟಕ ಮೀಸಲಾತಿ
ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ನಿಯಮದಂತೆ ಈ ಹುದ್ದೆಗಳನ್ನ ಹಂಚಿಕೆ ಮಾಡಲಾಗುತ್ತದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ
* ಕಲ್ಯಾಣ ಕರ್ನಾಟಕ ಭಾಗದ ಪರೀಕ್ಷೆ: ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳಿಗೆ ನಡೆಸುವ ಪರೀಕ್ಷೆಯಲ್ಲಿ ಆ ಭಾಗದ ಅಭ್ಯರ್ಥಿಗಳಿಗೆ ಶೇ. 80ರಷ್ಟು ಹಾಗೂ ಇತರೆ ಜಿಲ್ಲೆಗಳ ಅಭ್ಯರ್ಥಿಗಳಿಗೆ ಶೇ. 20ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ.
* ಇತರೆ ಜಿಲ್ಲೆಗಳ ಪರೀಕ್ಷೆ: ಅದೇ ರೀತಿ, ಇತರೆ ಜಿಲ್ಲೆಗಳಲ್ಲಿನ ಹುದ್ದೆಗಳಿಗೆ ನಡೆಸುವ ಪರೀಕ್ಷೆಯಲ್ಲಿ ಇತರೆ ಜಿಲ್ಲೆಗಳ ಅಭ್ಯರ್ಥಿಗಳಿಗೆ ಶೇ. 92ರಷ್ಟು ಮತ್ತು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ. 8ರಷ್ಟು ಮೀಸಲಾತಿ ನೀಡಲಾಗಿದೆ.
ಇದರಿಂದ ಒಬ್ಬ ಅಭ್ಯರ್ಥಿಗೆ ಎರಡು ಬಾರಿ ಪರೀಕ್ಷೆ ಬರೆಯುವ ಅವಕಾಶ ಸಿಗುತ್ತದೆ. ಆದರೆ, ಎರಡು ಬಾರಿ ಅರ್ಜಿ ಶುಲ್ಕ ಪಾವತಿಸಲು ಸಾಧ್ಯವಾಗದ ಅಂದರೆ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ಕೇವಲ ಒಂದು ಪರೀಕ್ಷೆಗೆ ಮಾತ್ರ ಸೀಮಿತವಾಗಬೇಕು ಎನ್ನುವಂತಾಗಿದೆ.
ಪ್ರಾಧಿಕಾರದ ಮೇಲಿನ ಹೆಚ್ಚುವರಿ ಹೊರೆ
ಎರಡು ಬಾರಿ ಕೆಇಎ ಪರೀಕ್ಷೆಗಳು ನಡೆಯುವುದರಿಂದ ಕೇವಲ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ, ಪರೀಕ್ಷಾ ಪ್ರಾಧಿಕಾರಕ್ಕೂ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ಪ್ರವೇಶ ಪತ್ರ ವಿತರಣೆ, ಪರೀಕ್ಷಾ ಕೇಂದ್ರಗಳ ಭದ್ರತೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆಗಳನ್ನ ಎರಡು ಬಾರಿ ಮಾಡಬೇಕಾಗುತ್ತದೆ.
ಈ ಗೊಂದಲದ ಬಗ್ಗೆ ಮಾತನಾಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಐಎಎಸ್ ಹೆಚ್. ಪ್ರಸನ್ನ "ಸರ್ಕಾರದ ನಿರ್ದೇಶನದಂತೆ ನಾವು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ನಿಯಮದಂತೆ ಪರೀಕ್ಷೆ ನಡೆಸಿ ಅರ್ಹತಾ ಪಟ್ಟಿ ನೀಡುವುದಷ್ಟೇ ಪ್ರಾಧಿಕಾರದ ಜವಾಬ್ದಾರಿ. ಒಂದೇ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರದ ಮಟ್ಟದಲ್ಲೇ ಅಂತಿಮ ನಿರ್ಧಾರವಾಗಬೇಕು ಎಂದಿದ್ದಾರೆ.
ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ವಯೋಮಿತಿ ಮೀರುವ ಆತಂಕ
ಈ ಪ್ರತ್ಯೇಕ ಪರೀಕ್ಷೆಗಳಿಂದಾಗಿ ಫಲಿತಾಂಶ ಪ್ರಕಟಣೆ ಮತ್ತು ನೇಮಕಾತಿ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿದೆ. ಹಾಗಾಗಿ ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸು ಹೊತ್ತಿರುವ, ವಿಶೇಷವಾಗಿ ಗರಿಷ್ಠ ವಯೋಮಿತಿಯ ಅಂಚಿನಲ್ಲಿರುವ ಅಭ್ಯರ್ಥಿಗಳಿಗೆ ಈ ವಿಳಂಬ ದೊಡ್ಡ ಪೆಟ್ಟು ನೀಡುತ್ತಿದೆ. ಈ ಪ್ರಕ್ರಿಯೆಗಳು ತಡವಾದಷ್ಟೂ ಹಲವು ಆಕಾಂಕ್ಷಿಗಳು ತಮ್ಮ ಮುಂದಿನ ಅವಕಾಶಗಳಿಂದ ವಂಚಿತರಾಗುವ ಆತಂಕ ಈಗ ಎದುರಾಗಿದೆ.
ಇದಲ್ಲದೆ, ಯುಪಿಎಸ್‌ಸಿ, ಎಸ್‌ಎಸ್‌ಸಿ, ಬ್ಯಾಂಕಿಂಗ್ ಹಾಗೂ ವಿಶ್ವವಿದ್ಯಾಲಯಗಳ ಪರೀಕ್ಷೆಗಳ ದಿನಾಂಕಗಳ ಜೊತೆ ತಾಳೆಯಾಗದಂತೆ ಕೇವಲ ಭಾನುವಾರಗಳಂದೇ ಪರೀಕ್ಷಾ ದಿನಾಂಕ ನಿಗದಿಪಡಿಸುವುದು ಪ್ರಾಧಿಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ತಜ್ಞರ ಸಲಹೆ: ಪರೀಕ್ಷೆ ಒಂದೇ ಇರಲಿ, ಆಯ್ಕೆ ಪಟ್ಟಿ ಎರಡಾಗಲಿ
ಈ ಸಮಸ್ಯೆಗೆ ಸುಲಭ ಪರಿಹಾರವಿದೆ ಎಂದು ಹಲವು ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ನೋಡಿ. ರಾಜ್ಯಾದ್ಯಂತ ಒಂದೇ ಸಾಮಾನ್ಯ ಪರೀಕ್ಷೆ ನಡೆಸಿ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಆದ್ಯತೆ ಮತ್ತು ಮೀಸಲಾತಿಯ ಆಧಾರದ ಮೇಲೆ ಎರಡು ಪ್ರತ್ಯೇಕ ಮೆರಿಟ್ ಪಟ್ಟಿಗಳನ್ನ ಸಿದ್ಧಪಡಿಸಬಹುದು. ಇದರಿಂದ ಆಡಳಿತಾತ್ಮಕ ವೆಚ್ಚ ಮತ್ತು ಸಮಯ ಉಳಿಯುವುದರ ಜೊತೆಗೆ ನೇಮಕಾತಿ ಪ್ರಕ್ರಿಯೆಗೂ ವೇಗ ಸಿಗಲಿದೆ. ಸರ್ಕಾರ ಈ ಬಗ್ಗೆ ಶೀಘ್ರವೇ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದಾರೆ.


Click it and Unblock the Notifications
