ಕರ್ನಾಟಕದಲ್ಲಿ SIR ಯಾವಾಗ ಆರಂಭ? ಈ ದಾಖಲೆಗಳನ್ನು ಸಲ್ಲಿಸದಿದ್ದರೆ ಮಿಸ್ ಆಗುತ್ತೆ ನಿಮ್ಮ ವೋಟರ್ ಐಡಿ, ಹುಷಾರ್
ಬೆಂಗಳೂರು: ನೀವು ಕಳೆದ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಿದ್ದೀರಾ? ಆದರೆ ಮುಂದಿನ ಬಾರಿಯೂ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ. ಹೌದು, ಚುನಾವಣಾ ಆಯೋಗವು ರಾಜ್ಯಾದ್ಯಂತ 'ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ' ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಈ ಸಂದರ್ಭದಲ್ಲಿ ನೀವು ಎಚ್ಚರಿಕೆ ವಹಿಸದಿದ್ದರೆ ನಿಮ್ಮ ವೋಟರ್ ಐಡಿ ರದ್ದಾಗುವ ಸಾಧ್ಯತೆಯಿದೆ. ಹಾಗಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ನಿಮ್ಮ ವೋಟರ್ ಐಡಿಯನ್ನು ಉಳಿಸಿಕೊಳ್ಳಿ.
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಂದರೇನು?
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಂದರೆ, ಪ್ರಸ್ತುತ ಇರುವ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅದರಲ್ಲಿರುವ ತಪ್ಪುಗಳನ್ನು ಸರಿಪಡಿಸುವ ಪ್ರಕ್ರಿಯೆಯಾಗಿದೆ. ನಕಲಿ ಮತದಾರರನ್ನು ತೆಗೆದುಹಾಕುವುದು, ಮೃತಪಟ್ಟವರ ಹಾಗೂ ಬೇರೆಡೆಗೆ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು ಮತ್ತು ಹೊಸದಾಗಿ 18 ವರ್ಷ ತುಂಬಿದ ಯುವಕ-ಯುವತಿಯರನ್ನು ಹೊಸದಾಗಿ ಸೇರ್ಪಡೆ ಮಾಡುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಈಗ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣಾ ಕಾರ್ಯವು ಇದೀಗ ಚುರುಕುಗೊಂಡಿದೆ.

ಮತದಾರರ ಪಟ್ಟಿ ಸಮಗ್ರ ಪರಿಶೀಲನೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಈ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLOs) ಖುದ್ದಾಗಿ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲನೆ ಮಾಡುತ್ತಾರೆ. ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆ, ಅವರ ವೋಟರ್ ಐಡಿ ವಿವರಗಳು ಮತ್ತು ಪ್ರಸ್ತುತ ವಾಸವಿರುವ ವಿಳಾಸವನ್ನು ತಾಳೆ ನೋಡುತ್ತಾರೆ. ಆನ್‌ಲೈನ್ ಮೂಲಕವೂ (Voter Helpline App ಅಥವಾ NVSP ಪೋರ್ಟಲ್) ಮತದಾರರು ತಮ್ಮ ವಿವರಗಳನ್ನು ಅಪ್‌ಡೇಟ್ ಮಾಡಲು ಮತ್ತು ಪರಿಶೀಲಿಸಲು ಚುನಾವಣಾ ಆಯೋಗ ಮುಕ್ತ ಅವಕಾಶ ಕಲ್ಪಿಸಿದೆ.
ಕರ್ನಾಟಕದಲ್ಲಿ SIR ಯಾವಾಗ ಆರಂಭ?
ಕರ್ನಾಟಕದಲ್ಲಿ ಚುನಾವಣಾ ಆಯೋಗದ 'ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ' ಪ್ರಕ್ರಿಯೆಯು ಜೂನ್ 20, 2026 ರಿಂದ ಅಧಿಕೃತವಾಗಿ ಆರಂಭವಾಗಲಿದೆ.
ಇದರ ಪ್ರಮುಖ ಹಂತಗಳು ಮತ್ತು ದಿನಾಂಕಗಳು ಈ ಕೆಳಗಿನಂತಿವೆ:
1. ಜೂನ್ 20 ರಿಂದ ಜೂನ್ 29: ಅಧಿಕಾರಿಗಳಿಗೆ ತರಬೇತಿ ಹಾಗೂ ಸಿದ್ಧತಾ ಕಾರ್ಯಗಳು ನಡೆಯಲಿವೆ.
2. ಜೂನ್ 30 ರಿಂದ ಜುಲೈ 29: ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಖುದ್ದಾಗಿ ಪರಿಶೀಲಿಸುವ ಪ್ರಮುಖ ಕೆಲಸ ನಡೆಯಲಿದೆ.
3. ಆಗಸ್ಟ್ 5: ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಇದರ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸೆಪ್ಟೆಂಬರ್ 4 ರವರೆಗೆ ಅವಕಾಶ ನೀಡಲಾಗುತ್ತದೆ.
4. ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ.
ಆದ್ದರಿಂದ, ಪ್ರಕ್ರಿಯೆಗೆ ಜೂನ್ 20 ರಂದು ಚಾಲನೆ ಸಿಕ್ಕರೂ, ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು ಬಂದು ಮಾಹಿತಿ ಕಲೆಹಾಕುವ ಕಾರ್ಯ ಜೂನ್ 30 ರಿಂದ ಶುರುವಾಗಲಿದೆ.
ವೋಟರ್ ಐಡಿ ಉಳಿಸಿಕೊಳ್ಳಲು ಮತದಾರರು ಏನು ಮಾಡಬೇಕು?
ಕರ್ನಾಟಕದ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಬಿಎಲ್ಒ (BLO) ಗಳು ಮನೆಗೆ ಬಂದಾಗ ಅವರಿಗೆ ಸರಿಯಾದ ಮಾಹಿತಿ ನೀಡಬೇಕು. ಒಂದು ವೇಳೆ ನೀವು ಮನೆ ಬದಲಾಯಿಸಿದ್ದರೆ, ತಕ್ಷಣವೇ ಸಂಬಂಧಪಟ್ಟ ನಮೂನೆ (Form 8) ತುಂಬಿ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಕೇಳುವ ಕನಿಷ್ಠ ದಾಖಲೆಗಳನ್ನು ಒದಗಿಸಿ ನಿಮ್ಮ ಅಸ್ತಿತ್ವವನ್ನು ಖಚಿತಪಡಿಸಿಕೊಳ್ಳಬೇಕು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಸಲ್ಲಿಸಬೇಕಾದ ದಾಖಲೆಗಳೇನು?
ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆಯಲ್ಲಿ ನಿಮ್ಮ ಗುರುತು ಮತ್ತು ವಿಳಾಸವನ್ನು ದೃಢೀಕರಿಸಲು ಕೆಲವು ಪ್ರಮುಖ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.
ಆಧಾರ್ ಕಾರ್ಡ್: ನಕಲಿ ವೋಟರ್ ಐಡಿ ತಡೆಯಲು ಮತ್ತು ಗುರುತು ಖಚಿತಪಡಿಸಲು.
ವಿಳಾಸ ದೃಢೀಕರಣ: ರೇಷನ್ ಕಾರ್ಡ್, ವಿದ್ಯುತ್ ಬಿಲ್, ನೀರಿನ ಬಿಲ್, ಬ್ಯಾಂಕ್ ಪಾಸ್‌ಬುಕ್ ಅಥವಾ ಪಾಸ್‌ಪೋರ್ಟ್.
ವಯಸ್ಸಿನ ದೃಢೀಕರಣ: ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣಪತ್ರ (ಹೊಸ ಮತದಾರರಿಗೆ ಮತ್ತು ತಿದ್ದುಪಡಿಗೆ).
ಭಾವಚಿತ್ರ: ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.
ಈ ಪ್ರಕ್ರಿಯೆಯನ್ನು ನೀವು ನಿರ್ಲಕ್ಷಿಸಿದರೆ, ಅಧಿಕಾರಿಗಳು ನಿಮ್ಮನ್ನು 'ಸ್ಥಳಾಂತರಗೊಂಡವರು' ಅಥವಾ 'ಮೃತಪಟ್ಟವರು' ಎಂದು ನಮೂದಿಸುವ ಅಪಾಯವಿರುತ್ತದೆ. ಒಮ್ಮೆ ಪಟ್ಟಿಯಿಂದ ಹೆಸರು ಡಿಲೀಟ್ ಆದರೆ, ಮತ್ತೆ ಸೇರ್ಪಡೆ ಮಾಡುವುದು ದೊಡ್ಡ ತಲೆನೋವಿನ ಕೆಲಸ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ದೃಷ್ಟಿಯಿಂದ ಈ ಪರಿಷ್ಕರಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಹೀಗಾಗಿ, ಪ್ರಜಾಪ್ರಭುತ್ವದಲ್ಲಿ ನಿಮ್ಮ ಅಮೂಲ್ಯವಾದ ಹಕ್ಕನ್ನು ಕಳೆದುಕೊಳ್ಳದಿರಲು, ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ದಾಖಲೆಗಳನ್ನು ಒದಗಿಸಿ ನಿಮ್ಮ ವೋಟರ್ ಐಡಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಿ.












Click it and Unblock the Notifications