Vande Mataram: ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ಮುಂದೆ ವಂದೇ ಮಾತರಂನ ಮೊದಲ 2 ಚರಣ ಮಾತ್ರ; ಡಿಕೆಶಿ ಸ್ಪಷ್ಟನೆ, ಕಾರಣವೇನು
Vande Mataram: ಕರ್ನಾಟಕದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ಮುಂದೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ನಮ್ಮ ಸರ್ಕಾರ ಅನುಸರಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆಗಸ್ಟ್ 26 ಬುಧವಾರ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ನಿಲುವಿಗೆ ತಾವು ಬದ್ಧರಾಗಿರುವುದಾಗಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರವನ್ನು ತಮ್ಮ ಸರ್ಕಾರ ಅನುಸರಿಸಲಿದೆ ಎಂದಿದ್ದಾರೆ. ಪಕ್ಷದ ನಿಲುವಿಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈಚೆಗೆ ಸ್ವಾತಂತ್ರ್ಯ ದಿನಾಚರಣೆಯಂದು ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಲಾಗಿತ್ತು. ಈ ವಿಷಯವನ್ನು ತಳ್ಳಿಹಾಕಿರುವ ಡಿ.ಕೆ ಶಿವಕುಮಾರ್ ಅವರು ಈ ನಿರ್ಧಾರ ತಮ್ಮ ಅರಿವಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದಿದ್ದಾರೆ.

ನನ್ನ ಪಕ್ಷದ ಸಿದ್ಧಾಂತವನ್ನು ನಾನು ನಂಬುತ್ತೇನೆ. ಪಕ್ಷವು ಏನೇ ನಿರ್ಧರಿಸಿದ್ದರೂ, ನಾನು ಅದಕ್ಕೆ ಬದ್ಧನಾಗಿರುತ್ತೇವೆ. ನನ್ನ ಅರಿವಿಲ್ಲದೆ ಅಥವಾ ರಾಜ್ಯಪಾಲರ ಭವನದಲ್ಲಿ ಅದು ಸಂಭವಿಸಬಹುದು ಎಂದು ನಾನು ಭಾವಿಸುತ್ತೇನೆ, ಆದರೆ ಭವಿಷ್ಯದಲ್ಲಿ ಮತ್ತು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ, ನಾವು ಮೊದಲು ಹೊಂದಿದ್ದ ಎರಡು ಚರಣಗಳನ್ನು ಹಾಡುವ ವಿಷಯಕ್ಕೆ ಬದ್ಧರಾಗಿರಲಿದ್ದೇವೆ ಎಂದು India Today ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಕಳೆದ ವಾರ ಸಾರ್ವಜನಿಕ ಮತ್ತು ರಾಷ್ಟ್ರೀಯ ಸಭೆಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎನ್ನುವ ತನ್ನ 1937ನೇ ಸಾಲಿನಲ್ಲಿ ತೆಗೆದುಕೊಂಡು ನಿರ್ಣಯವನ್ನು ಪುನರುಚ್ಚರಿಸಿತ್ತು. ಇನ್ನು ವಂದೇ ಮಾತರಂನ ಚರಣಗಳನ್ನು ಹಾಡುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ವಾಕ್ಸಮರ ನಡೆದಿತ್ತು. ರಾಷ್ಟ್ರಗೀತೆಗೆ ಪ್ರಸ್ತುತ ನೀಡಲಾಗಿರುವ ಅಥವಾ ನಿಗದಿಪಡಿಸಲಾಗಿರುವ ಕಾನೂನು ರಕ್ಷಣೆಯನ್ನೇ ಇದೀಗ ರಾಷ್ಟ್ರೀಯ ಗೀತೆ ವಂದೇ ಮಾತರಂಗೂ ವಿಸ್ತರಿಸಲಾಗಿದೆ. ವಂದೇ ಮಾತರಂಗೆ ಸಂಬಂಧಿಸಿದಂತೆ ಹೊಸ ಮಸೂದೆಯಲ್ಲಿ ರಾಷ್ಟ್ರಗೀತೆಯ ಎಲ್ಲಾ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಪ್ರತಿಪಾದನೆಯ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಗ್ವಾದ ನಡೆಯುತ್ತಿದೆ.
ರಾಜಕೀಯದಲ್ಲಿ ಓಲೈಕೆಯ / ತುಷ್ಟೀಕರಣ ಡಿ.ಕೆ ಶಿವಕುಮಾರ್ ಹೇಳಿದ್ದೇನು
ಇನ್ನು ಭಾರತೀಯ ರಾಜಕೀಯದಲ್ಲಿ ಓಲೈಕೆ / ತುಷ್ಟೀಕರಣಕ್ಕೆ ಸಂಬಂಧಿಸಿದಂತೆ ಸಹ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷವು ವೈವಿಧ್ಯತೆಯಲ್ಲಿ ನಂಬಿಕೆ ಇರಿಸಿದೆ ಮತ್ತು ಬಿಜೆಪಿ ಓಲೈಕೆಯ ರಾಜಕೀಯವನ್ನು ಅಭ್ಯಾಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದು ವೈವಿಧ್ಯಮಯ ಸಮುದಾಯಗಳ ದೇಶ. ಬಿಜೆಪಿ ಓಲೈಕೆಯ ರಾಜಕೀಯವನ್ನು ಅನುಸರಿಸುತ್ತಿದೆ, ಆದರೆ ನಾವು ಸಮಾಜದ ಪ್ರತಿಯೊಂದು ವರ್ಗವನ್ನು ನಮ್ಮೊಂದಿಗೆ ತೆಗೆದುಕೊಳ್ಳುವುದರಲ್ಲಿ ನಂಬಿಕೆ ಇರಿಸಿದ್ದೇವೆ. ನಮ್ಮ ಸಿದ್ಧಾಂತವು ಅದನ್ನೇ ಪ್ರತಿನಿಧಿಸುತ್ತದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಭಾರತವು ವೈವಿಧ್ಯಮಯ ಭಾಷೆಗಳು, ಸಂಸ್ಕೃತಿಗಳು ಮತ್ತು ಪ್ರದೇಶಗಳನ್ನು ಹೊಂದಿದೆ. ಇದು ವಿಭಿನ್ನ ಭಾಷೆಗಳು, ಸಂಸ್ಕೃತಿಗಳು ಮತ್ತು ಪ್ರದೇಶಗಳ ದೇಶ. ನಾವು ಎಲ್ಲರನ್ನೂ ಗೌರವಿಸುತ್ತೇವೆ. ಸೂರ್ಯ, ನೀರು ಅಥವಾ ಗಾಳಿಯಲ್ಲಿ ಯಾವುದೇ ಧರ್ಮವಿಲ್ಲ. ನೀವು ಇವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ, ನೀವು ಎಲ್ಲರೂ ಮಾಡುವಂತೆಯೇ ಅದೇ ಗಾಳಿಯನ್ನು ಉಸಿರಾಡಬೇಕು ಮತ್ತು ಅದೇ ನೀರನ್ನು ಕುಡಿಯಬೇಕು. ಹಾಗಾದರೆ, ಗಾಳಿ, ನೀರು, ಸಸ್ಯಗಳು ಅಥವಾ ಸೂರ್ಯನಲ್ಲಿ ಯಾವುದೇ ಧರ್ಮವಿದೆಯೇ ಎಂದು ಪ್ರಶ್ನಿಸಿದ್ದಾರೆ.


Click it and Unblock the Notifications
