ಟಾರ್ಪಾಲಿನ್ ಗುಡಿಸಲಿನಲ್ಲಿದ್ದ ಮಹಿಳೆಗೆ 10 ಲಕ್ಷದ ಮನೆ ಕಟ್ಟಿಕೊಟ್ಟ ಉಪ್ಪಿನಂಗಡಿ ಗಣೇಶೋತ್ಸವ ಸಮಿತಿ
ಹಬ್ಬಗಳು ಕೇವಲ ಸಂಭ್ರಮ, ಸಡಗರ, ಹಾಗೂ ಮೆರವಣಿಗೆಗಳಿಗೆ ಮಾತ್ರ ಸೀಮಿತವಾಗಬಾರದು, ಅವು ಸಮಾಜಮುಖಿ ಕೆಲಸಗಳಿಗೂ ನಾಂದಿಯಾಗಬೇಕು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂದೊಳ್ಳೆ ಉದಾಹರಣೆ.
ಉಳಿಯಲು ತಲೆ ಮೇಲೊಂದು ಭದ್ರವಾದ ಸೂರು ಇಲ್ಲದೆ ಪರದಾಡುತ್ತಿದ್ದ ಬಡ ಮಹಿಳೆಯೊಬ್ಬಳಿಗೆ ಸುಸಜ್ಜಿತ ಮನೆಯೊಂದನ್ನ ನಿರ್ಮಿಸಿಕೊಡುವ ಮೂಲಕ ಗಣೇಶೋತ್ಸವ ಸಮಿತಿಯು ಮಾನವೀಯತೆ ಮೆರೆದಿದೆ.

ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಈ ವರ್ಷ ತನ್ನ 50ನೇ ವರ್ಷದ ಸುವರ್ಣ ಮಹೋತ್ಸವವನ್ನಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದೆ. ಈ ಐತಿಹಾಸಿಕ ಮೈಲಿಗಲ್ಲನ್ನ ಕೇವಲ ಅದ್ದೂರಿ ಕಾರ್ಯಕ್ರಮಗಳ ಮೂಲಕ ಆಚರಿಸುವ ಬದಲು, ಸಮಾಜಕ್ಕೆ ಉಪಯುಕ್ತವಾದ ಹಾಗೂ ಶಾಶ್ವತವಾದ ಕೆಲಸವೊಂದನ್ನ ಮಾಡಬೇಕು ಎಂದು ಸಮಿತಿ ನಿರ್ಧರಿಸಿತ್ತು. ಈ ಒಳ್ಳೆಯ ಕೆಲಸದಿಂದ ಭಾಗಿ ಎಂಬ ಮಹಿಳೆಗೆ ಹೊಸ ಬದುಕನ್ನ ನೀಡಿದೆ ಎನ್ನಬಹುದು.
ಭಾಗಿ ಅವರು ಈ ಹಿಂದೆ ಹರಿದ ಟಾರ್ಪಾಲಿನ್ ಗುಡಿಸಲಿನಲ್ಲಿ ತುಂಬ ಕಷ್ಟದಿಂದ ಜೀವನ ನಡೆಸುತ್ತಿದ್ದರು. ಮಳೆ , ಗಾಳಿ, ಚಳಿಯ ನಡುವೆ ಅವರ ಬದುಕು ದುಸ್ತರವಾಗಿತ್ತು. ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಅವರ ಸ್ಥಿತಿಯನ್ನ ಅರಿತ ಸಮಿತಿಯು , ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಅವರಿಗೆ ಸುಸಜ್ಜಿತ ಮನೆಯೊಂದನ್ನ ಉಚಿತವಾಗಿ ನಿರ್ಮಿಸಿಕೊಡುವ ಮಹತ್ವದ ನಿರ್ಧಾರ ಕೈಗೊಂಡಿತು.
ಸಂಘ-ಸಂಸ್ಥೆಗಳ ಸಹಕಾರ ಮತ್ತು ದಾನಿಗಳ ನೆರವು
ಇಷ್ಟೊಂದು ದೊಡ್ಡ ಮೊತ್ತದ ಕಾರ್ಯ ಕೇವಲ ಒಂದು ಸಮಿತಿಯಿಂದ ಮಾತ್ರ ಸಾಧ್ಯವಿರಲಿಲ್ಲ. ಗಣೇಶೋತ್ಸವ ಸಮಿತಿಯ ಈ ಪುಣ್ಯ ಕಾರ್ಯಕ್ಕೆ ಊರಿನ ಜನರ ಬೆಂಬಲವೂ ಹರಿದುಬಂತು. ಪ್ರಮುಖವಾಗಿ ಟೀಮ್ ದಕ್ಷಿಣ ಕಾಶಿ, ಟೀಮ್ ಅಘೋರ ಸೇರಿದಂತೆ ಉಪ್ಪಿನಂಗಡಿಯ ಹಲವು ಸ್ಥಳೀಯ ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು ಹಾಗೂ ದಾನಿಗಳು ಈ ಯೋಜನೆಗೆ ಕೈಜೋಡಿಸಿದರು. ಸಾರ್ವಜನಿಕರ ದೇಣಿಗೆ, ಸಂಘ-ಸಂಸ್ಥೆಗಳ ಸಹಕಾರ ಹಾಗೂ ಶ್ರಮದಾನದ ಫಲವಾಗಿ ಬಡ ಮಹಿಳೆಯೊಬ್ಬರ ಕನಸಿನ ಮನೆ ಇಂದು ಸಾಕಾರಗೊಳ್ಳಲು ಸಾಧ್ಯವಾಯಿತು.
10 ಲಕ್ಷ ವೆಚ್ಚದ ಮನೆ ನಿರ್ಮಾಣ
ಹೊಸ ಮನೆ ನಿರ್ಮಾಣಕ್ಕಾಗಿ 2026ರ ಜನವರಿ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಹಗಲಿರುಳು ನಡೆದ ನಿರಂತರ ಕಾಮಗಾರಿಯ ಫಲವಾಗಿ ಇದೀಗ ಸುಂದರವಾದ ಆರ್.ಸಿ.ಸಿ ಮನೆ ತಲೆ ಎತ್ತಿದೆ. ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮನೆಯನನು ನಿರ್ಮಿಸಲಾಗಿದ್ದು, ದೈನಂದಿನ ಜೀವನಕ್ಕೆ ಅಗತ್ಯವಿರುವ ಸಕಲ ಸೌಕರ್ಯಗಳನ್ನ ಒದಗಿಸಲಾಗಿದೆ.
ಮನೆಯು ವಿಶಾಲವಾದ ಹಾಲ್ , ಊಟದ ಕೋಣೆ, ಮಲಗುವ ಕೋಣೆ, ಅಡುಗೆಮನೆ, ಸ್ನಾನಗೃಹ ಹಾಗೂ ಶೌಚಾಲಯವನ್ನ ಒಳಗೊಂಡಿದೆ.
ಇದರ ಜೊತೆಗೆ ವಿದ್ಯುತ್ ಸಂಪರ್ಕ, ಕೊಳವೆ ವ್ಯವಸ್ಥೆ, ನೀರಿನ ಟ್ಯಾಂಕ್ ಹಾಗೂ ಮನೆಯ ಸುತ್ತಲೂ ಸುಂದರವಾಗಿ ಪೇವರ್ಸ್ ( ಇಂಟರ್ ಲಾಕ್) ಅಳವಡಿಸುವ ಮೂಲಕ ಮನೆಯನ್ನ ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಇತ್ತೀಚೆಗಷ್ಟೇ, ಅಂದರೆ ಸೆಪ್ಟೆಂಬರ್ 10ರಂದು ಭಾಗಿ ಅವರಿಗೆ ಈ ಹೊಸ ಮನೆಯ ಕೀಲಿಕೈಯನ್ನ ಹಸ್ತಾಂತರಿಸಲಾಯಿತು.
ಹೊಸ ಮನೆಯ ಕೀಲಿಕೈ ಸ್ವೀಕರಿಸಿದ ಭಾಗಿ ಅವರ ಕಣ್ಣಲ್ಲಿ ಆನಂದಭಾಷ್ಪ ಹರಿದಿತ್ತು. ತಾವು ಇನ್ನು ಮುಂದೆ ಮಳೆ-ಗಾಳಿಗೆ ಬೆಚ್ಚದೆ ನೆಮ್ಮದಿಯಾಗಿ ಬದುಕಬಹುದು ಎಂಬ ಖುಷಿ ಅವರಲ್ಲಿ ಮನೆಮಾಡಿತ್ತು. ಹಬ್ಬದ ಹೆಸರಿನಲ್ಲಿ ದುಂದುವೆಚ್ಚ ಮಾಡುವ ಬದಲು, ಆಶ್ರಯವಿಲ್ಲದ ಜೀವಕ್ಕೆ ನೆಲೆ ಕಲ್ಪಿಸಿದ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಈ ಕಾರ್ಯವು ಇಂದು ರಾಜ್ಯದಾದ್ಯಂತ ಇತರ ಉತ್ಸವ ಸಮಿತಿಗಳಿಗೆ ಮಾದರಿಯಾಗಿದೆ.


Click it and Unblock the Notifications
