Tirupati: ತಿರುಪತಿ ದರ್ಶನಕ್ಕೆ ತೆರಳುವ ಕನ್ನಡಿಗರಿಗೆ ಗುಡ್ ನ್ಯೂಸ್
ಬೆಂಗಳೂರು, ಮಾರ್ಚ್ 05: ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರ ತಿರುಮಲ ತಿರುಪತಿ ದೇವಾಲಯಕ್ಕೆ ತೆರಳುವ ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕರ್ನಾಟಕದಿಂದ ಲಕ್ಷಾಂತರ ಭಕ್ತರು ಶ್ರೀನಿವಾಸನ ದರ್ಶನಕ್ಕೆ ತೆರಳುತ್ತಾರೆ. ಹೀಗಾಗಿ ತಿರುಪತಿಯಲ್ಲಿ ವಾಸ್ತವ್ಯ ಹೂಡುವ ಕರ್ನಾಟಕದ ಭಕ್ತರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ಹಂಪಿ ಬ್ಲಾಕ್ ವಸತಿ ಗೃಹ ಉದ್ಘಾಟನೆಗೆ ಸಿದ್ಧವಾಗುತ್ತಿದೆ.
ಕರ್ನಾಟಕ ಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 110 ಕೊಠಡಿಗಳಿರುವ ಹಂಪಿ ಬ್ಲಾಕ್ ವಸತಿ ಗೃಹದ ಪೂಜಾ ಕಾರ್ಯಕ್ರಮ ಇಂದು ನೆರವೇರಿದ್ದು, ಕರ್ನಾಟಕದ ಶ್ರೀನಿವಾಸನ ಭಕ್ತರ ಬಹುಕಾಲದ ಕನಸು ನನಸಾಗುತ್ತಿದೆ. ಹಂಪಿ ಬ್ಲಾಕ್ ವಸತಿ ಗೃಹದ ಪೂಜಾ ಕಾರ್ಯಕ್ರಮವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಟಿಟಿಡಿ ಸದಸ್ಯರಾದ ಎಸ್. ಆರ್. ವಿಶ್ವನಾಥ್, ಕಂದಾಯ ಇಲಾಖೆ (ಮುಜರಾಯಿ) ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ಮುಜರಾಯಿ ಇಲಾಖೆ ಆಯುಕ್ತರ ಬಸವರಾಜೇಂದ್ರ ಉಪಸ್ಥಿತಿಯಲ್ಲಿ ನೆರವೇರಿಸಲಾಗಿದೆ.

ತಿರುಪತಿಗೆ ತೆರಳುವ ಕರ್ನಾಟಕದ ಭಕ್ತರಿಗೆ ಹಂಪಿ ಬ್ಲಾಕ್ ವಸತಿ ಗೃಹ ನಿರ್ಮಾಣದ ಬಗ್ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. "ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿಯಲ್ಲಿ ವಾಸ್ತವ್ಯ ಹೂಡುವ ರಾಜ್ಯದ ಭಕ್ತರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಭವನದ ಆವರಣದಲ್ಲಿ 110 ಕೊಠಡಿಗಳಿರುವ ಹಂಪಿ ಬ್ಲಾಕ್ ವಸತಿ ಗೃಹ ನಿರ್ಮಿಸಲಾಗುತ್ತಿದೆ".
"ಇನ್ನು ಹೆಚ್ಚುವರಿ 2 ಬ್ಲಾಕ್, ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಪೂರ್ಣಗೊಂಡ ನಂತರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿಡಿಕೆ ಶಿವಕುಮಾರ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಆಂಧ್ರಪ್ರದೇಶದ ಮುಜರಾಯಿ ಮಂತ್ರಿಗಳು, ಟಿಟಿಡಿ ಅಧ್ಯಕ್ಷರು, ಗಣ್ಯರು ಹಾಗೂ ಹಿಂದಿನ ಸರ್ಕಾರದಲ್ಲಿ ಈ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕಾರಣಕರ್ತರಾದ ಎಲ್ಲರನ್ನು ಆಹ್ವಾನಿಸಿ ಅಧಿಕೃತವಾಗಿ ಸಾರ್ವಜನಿಕರ ಸೇವೆಗೆ ಇವುಗಳನ್ನು ಲೋಕಾರ್ಪಣೆಗೊಳಿಸಲಾಗುವುದು" ಎಂದು ತಿಳಿಸಿದರು.

ಅಲ್ಲದೇ "ತಿರುಪತಿ ಭಕ್ತರ ಅಗತ್ಯಗಳನ್ನು ಪೂರೈಸುವ ಬಗ್ಗೆ ಪ್ರಯತ್ನ ಮಾಡಿದ್ದೇವೆ. ತಿರುಪತಿಯಲ್ಲಿರುವ ಕರ್ನಾಟಕ ಭವನ ಬಳಿ ಇನ್ನೂ ಹೆಚ್ಚುವರಿ 2 ಬ್ಲಾಕ್‌ನ 190 ರೂಂಗಳು ಹಾಗೂ 84 ಹಳೆಯ ಮೇಲ್ದರ್ಜೆಗೇರಿಸಿದ ರೂಂಗಳು ಹಾಗೂ 1,000 ಜನ ಸಾಮರ್ಥ್ಯದ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ" ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ಇನ್ನು ಕರ್ನಾಟಕ ರಾಜ್ಯ ಸರ್ಕಾರ 220 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ, 384 ಕೊಠಡಿಗಳಿರುವ ವಸತಿ ಗೃಹ ನಿರ್ಮಿಸುತ್ತಿದ್ದು, 2024ರ ಡಿಸೆಂಬರ್ ಒಳಗೆ ಈ ಎಲ್ಲಾ ಕಾಮಾಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications