ಬೆಂಗಳೂರಿನಲ್ಲಿ ನಿಲ್ಲದ ನಾಯಿಗಳ ಹಾವಳಿ: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಆಕ್ರೋಶ, ಎಷ್ಟಿದೆ ನಾಯಿಗಳ ಸಂಖ್ಯೆ ?
ಬೆಂಗಳೂರಿನಲ್ಲಿ ನಾಯಿಗಳ ಹಾವಳಿ ಮತ್ತೆ ಮಿತಿ ಮೀರಿದೆ. ಬಿಬಿಎಂಪಿ ನಾಯಿಗಳ ನಿಯಂತ್ರಣದಲ್ಲಿ ವಿಫಲವಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಬೆಂಗಳೂರಿನಲ್ಲಿ ನಾಯಿಗಳ ದಾಳಿಯಿಂದ ಮಹಿಳೆಯೊಬ್ಬರು ಬುಧವಾರ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಾಯಿಗಳ ದಾಳಿಯಿಂದ ಮಹಿಳೆಯೊಬ್ಬರು ಬುಧವಾರ ಮೃತಪಟ್ಟಿದ್ದಾರೆ. ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಹತ್ತಕ್ಕೂ ಹೆಚ್ಚು ನಾಯಿಗಳು ನಡೆಸಿದ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ನಾಯಿಗಳನ್ನು ನಿಯಂತ್ರಣ ಮಾಡುವುದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನಾಯಿಗಳ ನಿಯಂತ್ರಣದ ಬಗ್ಗೆ ದೂರುಗಳು ಕೇಳಿ ಬರುವುದು ಸಾಮಾನ್ಯ. ಆದರೆ, ಕಳೆದ ವರ್ಷ ನಾಯಿಗಳ ಸಂತತಿಯಲ್ಲಿ ನಿಯಂತ್ರಣವಾಗಿದೆ ಎಂದು ಬಿಬಿಎಂಪಿ ಹೇಳಿಕೊಂಡಿತ್ತು. ಆದರೆ, ಈಗ ಮತ್ತೆ ನಾಯಿಗಳ ಸಂತತಿ ಹಾಗೂ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ, ಬಿಬಿಎಂಪಿ ವರದಿ ಎಷ್ಟು ಸತ್ಯ ಎನ್ನುವ ಪ್ರಶ್ನೆ ಎದುರಾಗಿದೆ.
ಬೆಂಗಳೂರಿನಲ್ಲಿದೆ ಮೂರು ಲಕ್ಷ ನಾಯಿಗಳು!
ಬೆಂಗಳೂರಿನಲ್ಲಿ ಬರೋಬ್ಬರಿ ಮೂರು ಲಕ್ಷ ನಾಯಿಗಳು ಇವೆ. ಕಳೆದ ವರ್ಷ ಬಿಬಿಎಂಪಿ ಬಿಡುಗಡೆ ಮಾಡಿದ್ದ ವರದಿಯ ಪ್ರಕಾರ ಬರೋಬ್ಬರಿ 2,79,335 ಬೀದಿ ನಾಯಿಗಳು ಬೆಂಗಳೂರಿನಲ್ಲಿ ಇವೆ. ಬಿಬಿಎಂಪಿ ಸಮೀಕ್ಷೆ ನಡೆಸಿ, ಒಂದು ವರ್ಷಕ್ಕೂ ಮೇಲಾಗಿದೆ. ಇದೀಗ ಬೀದಿ ನಾಯಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 2023ನೇ ಸಾಲಿನಲ್ಲಿ ಬೀದಿನಾಯಿಗಳ ಸಮೀಕ್ಷೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 2,79,335 ಬೀದಿ ನಾಯಿಗಳಿವೆ ಎಂದು ಬಿಬಿಎಂಪಿಯ ಆರೋಗ್ಯ ಹಾಗೂ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ತಿಳಿಸಿದ್ದರು.

ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿಯಂತ್ರಣ ಮಾಡುವ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯ ಎಂಟೂ ವಲಯಗಳಲ್ಲೂ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಆಂಟಿರೇಬೀಸ್ ಲಸಿಕೆ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಮಾಡುತ್ತಿರುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ಇದೀಗ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನಾಯಿಗಳ ಸಂತತಿ ಹೆಚ್ಚಾಗಿದೆ. ಅಲ್ಲದೇ ನಾಯಿಗಳು ಆಕ್ರಮಣಕಾರಿ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿವೆ.
ಯಾವ ವಲಯದಲ್ಲಿ ಎಷ್ಟಿತ್ತು ನಾಯಿಗಳ ಸಂಖ್ಯೆ ?
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅತಿ ಹೆಚ್ಚು ನಾಯಿಗಳು ಇವೆ ಎಂದು ಬಿಬಿಎಂಪಿ ಬಿಡುಗಡೆ ಮಾಡಿದ್ದ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಬೆಂಗಳೂರಿನ ನಾಯಿಗಳು ಮಹದೇವಪುರ ವಲಯ ವ್ಯಾಪ್ತಿಯೊಂದರಲ್ಲೇ ಬರೋಬ್ಬರಿ 58,371 ನಾಯಿಗಳು ಇವೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು. ಎರಡನೇ ಸ್ಥಾನದಲ್ಲಿ ರಾಜರಾಜೇಶ್ವರಿ (ಆರ್.ಆರ್ ನಗರ)ವೊಂದರಲ್ಲೇ ಬರೋಬ್ಬರಿ 41,266 ನಾಯಿಗಳು ಇವೆ ಎನ್ನುವ ಅಂಶ ಬೆಳಕಿಗೆ ಬಂದಿತ್ತು.
ಬಿಬಿಎಂಪಿಯ ವಲಯವಾರು ನಾಯಿಗಳ ಸಂಖ್ಯೆ (2023ರ ಪ್ರಕಾರ)
ವಲಯ ನಾಯಿಗಳ ಸಂಖ್ಯೆ
ಮಹದೇವಪುರ 58,371
ಆರ್.ಆರ್.ನಗರ 41,266
ಪೂರ್ವ 37,685
ಯಲಹಂಕ 36,343
ಬೊಮ್ಮನಹಳ್ಳಿ 39,183
ದಕ್ಷಿಣ 23,241
ದಾಸರಹಳ್ಳಿ 21,221
ಪಶ್ಚಿಮ 22,025
ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ಲೋಪ ?
ಬೆಂಗಳೂರಿನಲ್ಲಿ ನಾಯಿಗಳ ಸಂತತಿ ಹೆಚ್ಚಾಗುತ್ತಿರುವುದಕ್ಕೂ, ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೂ ಒಂದಕ್ಕೊಂದು ಸಂಬಂಧವಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆಯಿಂದಲೂ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಜವಾಬ್ದಾರಿಯನ್ನು ಬಿಬಿಎಂಪಿಯು ಏಜೆನ್ಸಿಗಳಿಗೆ ನೀಡಿದ್ದು, ಕೆಲವು ಏಜೆನ್ಸಿಗಳು ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ಲೋಪವೆಸಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.












Click it and Unblock the Notifications