40 ಲಕ್ಷ ರೂ. ಸಂಬಳವಿದ್ದರೂ ಡೇ ಟ್ರೇಡಿಂಗ್ ಹುಚ್ಚಿಗೆ ಬಿದ್ದು 50 ಲಕ್ಷ ಕಳೆದುಕೊಂಡ ಟೆಕ್ಕಿ: ಈಗ 2 ಎಕರೆ ಜಮೀನು ಮಾರಲು ಸಿದ್ಧತೆ!
ಸಾಮಾನ್ಯವಾಗಿ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಕೈತುಂಬಾ ಸಂಬಳವಿರುತ್ತದೆ. ಹೀಗೆ ಬರುವ ಹಣವನ್ನ ಎಲ್ಲಾದರೂ ಹೂಡಿಕೆ ಮಾಡಿ, ಹಣವನ್ನು ಇನ್ನೂ ಹೆಚ್ಚು ಮಾಡಿಕೊಳ್ಳಬೇಕು ಎನ್ನುವ ಹುಚ್ಚು ಆಸೆ ಅನೇಕರಲ್ಲಿ ಇರುತ್ತದೆ. ಆದರೆ, ಷೇರು ಮಾರುಕಟ್ಟೆಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಡೇ ಟ್ರೇಡಿಂಗ್‌ಗೆ ಇಳಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆ.
ವಾರ್ಷಿಕ 3.5 ಲಕ್ಷ ರೂಪಾಯಿ ವೇತನದಿಂದ ವೃತ್ತಿಜೀವನ ಆರಂಭಿಸಿ, ಪ್ರಸ್ತುತ 40 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಟೆಕ್ಕಿಯೊಬ್ಬರು ಡೇ ಟ್ರೇಡಿಂಗ್‌ನಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಡೇ ಟ್ರೇಡಿಂಗ್ ನಷ್ಟ ಅನುಭವಿಸಿದ್ದಾರೆ. ಈ ಘಟನೆಯನ್ನ ಅವರ ಸಂಬಂಧಿಯಾದ ವಿಕಾಸ್ ಎಂಬುವವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಕಾಸ್ ನೀಡಿರುವ ಮಾಹಿತಿಯ ಪ್ರಕಾರ, ಈ ಟೆಕ್ಕಿ ಮೂಲತಃ ತೆಲುಗು ಮಾಧ್ಯಮದಲ್ಲಿ ಓದಿದವರು. 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ ಅವರು, ಆರಂಭದಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪರದಾಡಿದ್ದರು. ನಂತರ ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು, 2016ರಲ್ಲಿ ಟೈರ್ 3 ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪೂರ್ಣಗೊಳಿಸಿದರು.
ನಂತರ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಪ್ರಖ್ಯಾತ ಐಟಿ ಕಂಪನಿ ಇನ್ಫೋಸಿಸ್ ಸೇರಿದ ಇವರು, ಕೇವಲ 3.5 ಲಕ್ಷ ರೂಪಾಯಿ ವಾರ್ಷಿಕ ವೇತನದೊಂದಿಗೆ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ತಮ್ಮ ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಬೆಳೆದು ಇಂದು ವಾರ್ಷಿಕ ಸುಮಾರು 40 ಲಕ್ಷ ರೂಪಾಯಿ ಗಳಿಸುವ ಮಟ್ಟಕ್ಕೆ ತಲುಪಿದ್ದರು. ಸರ್ಕಾರಿ ಶಾಲೆಯಲ್ಲಿ ಓದಿದ ಸಾಮಾನ್ಯ ಯುವಕನೊಬ್ಬ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದು ನಿಜಕ್ಕೂ ದೊಡ್ಡ ಸಾಧನೆಯೇ ಆಗಿತ್ತು.
ಟೆಲಿಗ್ರಾಂ ಚಾನೆಲ್‌ನಿಂದ ಶುರುವಾದ ಡೇ ಟ್ರೇಡಿಂಗ್ ನಷ್ಟ
ಕೈಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಬರಲು ಶುರುವಾದಾಗ, ಆ ಹಣವನ್ನ ಸುಮ್ಮನೆ ಇಡುವ ಬದಲು ಎಲ್ಲಾದರೂ ಹೂಡಿಕೆ ಮಾಡಬೇಕು ಎಂಬ ಯೋಚನೆ ಈ ಟೆಕ್ಕಿಗೆ ಬಂದಿದೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿರುವಾಗ, ಟ್ರೇಡಿಂಗ್ ಸಿಗ್ನಲ್‌ಗಳನ್ನ ನೀಡುತ್ತಿದ್ದ ಟೆಲಿಗ್ರಾಂ ಚಾನೆಲ್ ಒಂದು ಇವರ ಕಣ್ಣಿಗೆ ಬಿದ್ದಿದೆ.
ಆ ಚಾನೆಲ್ ನೀಡುತ್ತಿದ್ದ ಸೂಚನೆಗಳ ಮೇರೆಗೆ ಆರಂಭದಲ್ಲಿ ಸಣ್ಣ ಮೊತ್ತದ ಟ್ರೇಡಿಂಗ್ ಶುರು ಮಾಡಿದ ಇವರಿಗೆ, ಅಂದುಕೊಂಡಂತೆ 2 ರಿಂದ 3 ಲಕ್ಷ ರೂಪಾಯಿ ಲಾಭ ಸಿಕ್ಕಿದೆ. ಈ ಆರಂಭಿಕ ಯಶಸ್ಸು ಅವರಲ್ಲಿ ಅತಿಯಾದ ಆತ್ಮವಿಶ್ವಾಸ ಹಾಗೂ ದುರಾಸೆಯನ್ನ ಹುಟ್ಟುಹಾಕಿತು.
There is a relative of mine who completed his https://t.co/BC6fLkcQNf CSE from a Tier-3 college in 2016. Till 10th, he studied in a government school. Today, the same guy who started earning ₹3.5 LPA is now earning around ₹40 LPA. But recently, he lost ₹50 lakhs in day…
— Vikas Alwys (@VikasAlwys) August 27, 2026
50 ಲಕ್ಷ ರೂ. ನಷ್ಟ, ಜಮೀನು ಮಾರಾಟ ಅನಿವಾರ್ಯ
ಆರಂಭದ ಲಾಭದಿಂದ ಪ್ರೇರೇಪಿತರಾದ ಅವರು, ತಾವು ದುಡಿದು ಕೂಡಿಟ್ಟಿದ್ದ ಭಾರಿ ಮೊತ್ತದ ಹಣವನ್ನ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮುಂದಾದರು. ಒಂದು ಹಂತದಲ್ಲಿ ಟೆಲಿಗ್ರಾಂ ಚಾನೆಲ್‌ನ ಸಿಗ್ನಲ್‌ಗಳನ್ನ ಕೂಡ ನಿರ್ಲಕ್ಷಿಸಿದ ಅವರು, ಷೇರು ಮಾರುಕಟ್ಟೆಯ ಬಗ್ಗೆ ತಮಗೇ ಎಲ್ಲವೂ ತಿಳಿದಿದೆ ಎಂದು ಭಾವಿಸಿ ಸ್ವಂತ ವಿಶ್ಲೇಷಣೆಯ ಆಧಾರದ ಮೇಲೆ ಟ್ರೇಡಿಂಗ್ ಮಾಡಲು ಶುರು ಮಾಡಿದರು. ಆದರೆ, ಮಾರುಕಟ್ಟೆಯ ಏರಿಳಿತಗಳ ಅರಿವಿಲ್ಲದ ಕಾರಣ ಅವರು ಡೇ ಟ್ರೇಡಿಂಗ್‌ನಲ್ಲಿ ಒಟ್ಟು 50 ಲಕ್ಷ ರೂಪಾಯಿಗಳಷ್ಟು ನಷ್ಟ ಎದುರಿಸಬೇಕಾಯಿತು.
ಈಗ ತಮ್ಮ ದುಡಿಮೆಯನ್ನೆಲ್ಲಾ ಕಳೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿರುವ ಈ ಟೆಕ್ಕಿ, ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ತಮ್ಮ ಬಳಿಯಿರುವ ಎರಡು ಎಕರೆ ಕೃಷಿ ಜಮೀನನ್ನು ಮಾರಾಟ ಮಾಡುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ವಿಕಾಸ್ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.


Click it and Unblock the Notifications
