• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

50 ವರ್ಷ ತುಂಬಿದ ಸುಧಾ ವಾರಪತ್ರಿಕೆಗೆ ಶುಭಾಶಯ

By ಶ್ರೀವತ್ಸ ಜೋಶಿ
|

ಕನ್ನಡಿಗರ ಮನಗೆದ್ದಿರುವ ಜನಪ್ರಿಯ ವಾರಪತ್ರಿಕೆ 'ಸುಧಾ'ಗೆ ಈಗ 50ರ ಸಂಭ್ರಮ. ದಿ ಪ್ರಿಂಟರ್ಸ್ (ಮೈಸೂರು) ಪ್ರೈ.ಲಿ ಪ್ರಕಟಿಸುವ ಸುಧಾ ವಾರಪತ್ರಿಕೆ ತನ್ನ ವೈವಿಧ್ಯಮಯ ಲೇಖನ, ಅಂಕಣ, ಕಾರ್ಟೂನ್, ಕಥೆ, ವಿಶೇಷಾಂಕಗಳ ಮೂಲಕ ಸಂಚಿಕೆಯಿಂದ ಸಂಚಿಕೆಗೆ ಕನ್ನಡ ಓದುಗರಿಗೆ ಆಪ್ತವಾಗಿದೆ. 50 ವರ್ಷ ಪೂರೈಸಿರುವ 'ಸುಧಾ' ವಾರ ಪತ್ರಿಕೆ ತಂಡಕ್ಕೆ ಒನ್ ಇಂಡಿಯಾ ಸಂಸ್ಥೆ ಶುಭ ಹಾರೈಸುತ್ತದೆ. ನಮ್ಮ ಓದುಗರಾದ ಶ್ರೀವತ್ಸ ಜೋಶಿ ಅವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಸುಧಾ ಕುರಿತ ತಮ್ಮ ಸಿಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೋಶಿ ಅವರ ಸಿಹಿನೆನೆಕೆಗಳನ್ನು ಮುಂದೆ ಓದಿ-ಸಂಪಾದಕ

50ಕ್ಕೆ ಕಾಲಿಟ್ಟ ಚಿರಜವ್ವನೆ 'ಸುಧಾ'. 25ರವಳಿದ್ದಾಗ ತೂಗಿದ್ದೆ ನಾನವಳನ್ನು! : ಇದೊಂದು ತಲೆಮಾರಿನ ಹೆಚ್ಚಿನೆಲ್ಲ ಕನ್ನಡಿಗರಲ್ಲೂ ಕನ್ನಡ ಸಂಸ್ಕೃತಿಯ ಸತ್ವವನ್ನು ಹನಿಹನಿಯಾಗಿ ವಾರವಾರವೂ ಎರಕಹೊಯ್ದು ಬೆಳೆಸಿದ 'ಸುಧಾ'ವಾರಪತ್ರಿಕೆಗೆ ಈಗ ಐವತ್ತರ ಸಂಭ್ರಮ! 1965ರ ಜನವರಿ 11ರಂದು ಮೊದಲ ಸಂಚಿಕೆ ಪ್ರಕಟವಾದದ್ದಂತೆ. ಅಂದರೆ ಇದೀಗ 49 ಕ್ಯಾಲೆಂಡರ್ ‌ಗಳ ತಲಾ 52 ವಾರಗಳನ್ನು ಸುಮಾರು 2500ಕ್ಕೂ ಹೆಚ್ಚು ಸಂಚಿಕೆಗಳ ಮೂಲಕ ತಿರುವಿಹಾಕಿರುವ 'ಸುಧಾ', ನಿಜವಾಗಿಯೂ ಅಷ್ಟು ಅವಧಿಯನ್ನು ಒಂದು ಕಾಲಸಮುದ್ರ ಎಂದು ಪರಿಗಣಿಸಿದರೆ ಅದನ್ನು ಮಥಿಸಿದಾಗ ಹೊರಬಂದ ಅಮೃತವೆಂದರೆ ಉತ್ಪ್ರೇಕ್ಷೆಯಲ್ಲ.

ಈಗ ನಾನು ಅಷ್ಟೇನೂ ನಿಯಮಿತವಾಗಿ ದುಂಬಾಲುಬಿದ್ದು ಎನ್ನುವಂತೆ 'ಸುಧಾ'ವನ್ನು ಓದುವುದಿಲ್ಲವಾದರೂ ಒಂದು ಕಾಲದಲ್ಲಿ 'ಮುಖಪುಟದಿಂದ ಕೊನೆಪುಟದವರೆಗೆ ಒಂದಕ್ಷರ ಬಿಡದೆ ಓದು'ವುದನ್ನು ಮಾಡುತ್ತಿದ್ದ ಆಸಾಮಿಯೇ ನಾನೂ. ನಿಮ್ಮನೆಗಳಲ್ಲಿ ಹೇಗಿತ್ತೋ ಗೊತ್ತಿಲ್ಲ, ನಮ್ಮನೆಯಲ್ಲಿ ಪ್ರತಿವಾರ 'ಸುಧಾ'ದ ಹೊಸ ಸಂಚಿಕೆ ಬರುವಾಗ ಮೊದಲು ಯಾರು ಓದುವುದು ಎಂಬ ಪೈಪೋಟಿ. ಅದರ ನಿವಾರಣೆಗೆ ಒಂದು ವಿಶಿಷ್ಟ ಒಪ್ಪಂದ ಮನೆಮಂದಿಯೆಲ್ಲ ಸೇರಿ ಮಾಡ್ಕೊಂಡಿದ್ದೆವು.

ಏನೆಂದರೆ ಆ ವಾರದ ಸಂಚಿಕೆಯ ಮುಖಪುಟದಲ್ಲಿ 'ಸುಧಾ' ಎಂದು ತಲೆಬರಹ ಯಾವ ಬಣ್ಣದಲ್ಲಿರುತ್ತದೆ ಎಂದು ಒಬ್ಬೊಬ್ಬರು ಒಂದೊಂದು ಬಣ್ಣದಂತೆ ಊಹಿಸಬೇಕು. ಸಂಚಿಕೆ ಬಂದಾಗ ಯಾರ ಊಹೆಯ ಬಣ್ಣ ಸರಿ ಇರುತ್ತದೋ ಅವರಿಗೆ ಮೊದಲ ಓದಿನ ಮನ್ನಣೆ. ಅಷ್ಟಾದರೂ "ಪದಬಂಧ ನೀನೇ ತುಂಬಿಸಿಬಿಡಬೇಡ್ವೋ ನಮಗೂ ಇರಲಿ" ಎಂದು ಇತರರ ತಕರಾರು.

'ನೀವು ಕೇಳಿದಿರಿ?'ಯಲ್ಲಿ ಕಚಗುಳಿ ಕೊಡುವ ಪ್ರಶ್ನೋತ್ತರದಿಂದ ಆರಂಭಿಸಿ, ಧಾರಾವಾಹಿ, ಹಾಸ್ಯಲೇಖನ, ಜಾಣರಪುಟ, ಹೊಸರುಚಿ, ಕಾಮಿಕ್ಸ್ (ಶೂಜ, ಫ್ಯಾಂಟಮ್, ಡಾಬೂ, ಮಜನು, ಕಪೀಶ... ಎಲ್ಲರ ಅಚ್ಚುಮೆಚ್ಚು) ವಾರೆನೋಟ, ವಾರದ ವ್ಯಕ್ತಿ, ಸುದ್ದಿಸ್ವಾರಸ್ಯ- ಹೀಗೆ ಒಂದೊಂದು ರಸಘಟ್ಟಿಗಳ ಸಿಹಿಯನ್ನೂ ಸವಿದಾಗ ಏನೋ ಒಂದು ವಿಶೇಷ ಸಂತೃಪ್ತಿ. 'ಸುಧಾ'ದಲ್ಲಿ ಓದುಗರ ಪತ್ರಗಳ 'ಸಮುದ್ರಮಥನ'ದಲ್ಲಿ ನನ್ನ ಕೆಲವು ಪತ್ರಗಳು ಪ್ರಕಟವಾಗಿದ್ದವು. 'ಚೌ ಚೌ ಚೌಕಿ' ತರ್ಲೆ ಪ್ರಶ್ನೋತ್ತರದ ಅಂಕಣದಲ್ಲೂ ನನ್ನ ಕೆಲವು ತರ್ಲೆ ಉತ್ತರಗಳು ಪ್ರಕಟವಾಗಿದ್ದವು.

ಪ್ರಶ್ನೆ: 'ಸಿದ್ಧಪುರುಷ' ಎಂದರೆ ಯಾರು?

ನನ್ನ ಉತ್ತರ: "ಎಲ್ಲಿಗಾದರೂ ಹೊರಡುವಾಗ ತಾನು ಕ್ವಿಕ್ಕಾಗಿ ರೆಡಿಯಾಗಿ ಹೆಂಡತಿಯ ಮೇಕಪ್ ಮುಗಿಯುವವರೆಗೆ ಗಂಟೆಗಟ್ಟಲೆ ಕಾಯಬೇಕಾಗಿ ಬರುವ ಗಂಡನೆಂಬ ಬಡಪಾಯಿ."

ಪ್ರಶ್ನೆ: 'ತತ್ತ್ವಮಸಿ' ಎಂದರೇನು?

ನನ್ನ ಉತ್ತರ: "ಜಿಡ್ಡು ಕೃಷ್ಣಮೂರ್ತಿಯವರಂಥ ದಾರ್ಶನಿಕರು ಬರೆಯುವಾಗ ಲೇಖನಿಯಲ್ಲಿ ಬಳಸುವ ಇಂಕ್."

ಪ್ರಶ್ನೆ: 'ಲಲಿತಕಲೆ' ಎಂದರೇನು?

ನನ್ನ ಉತ್ತರ: "ಯಾವ ಕಲೆಯನ್ನು ಸರ್ಫ್ ನಿವಾರಿಸುತ್ತದೆಂದು ಲಲಿತಾ ಪವಾರ್ ಶಿಫಾರಸು ಮಾಡಿದ್ದಾರೋ ಆ ಕಲೆಯೇ ಲಲಿತಕಲೆ."

'ಸುಧಾ' 1989ರಲ್ಲಿ ಬೆಳ್ಳಿಹಬ್ಬ ಆಚರಿಸಿತ್ತು. ನಾನು ಆಗ ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದೆ. ಬೆಳ್ಳಿಹಬ್ಬದ ವಿಶೇಷ ಸಂಚಿಕೆಯಲ್ಲಿ ಪ್ರಕಟಣೆಗೆ "ನಿಮ್ಮ ದೃಷ್ಟಿಯಲ್ಲಿ ಸುಧಾ ಹೇಗಿದೆ?" ಎಂದು ಓದುಗರಿಂದ ಪತ್ರಗಳನ್ನು ಆಹ್ವಾನಿಸಲಾಗಿತ್ತು. ಪ್ರಕಟವಾಗುವ ಪತ್ರಗಳಿಗೆ ಸೂಕ್ತ ಸಂಭಾವನೆ ಇದೆಯೆಂದೂ ಪ್ರಕಟಿಸಿದ್ದರು. ನಾನೂ ಒಂದು ಪತ್ರ ಬರೆದಿದ್ದೆ.

"ತಕ್ಕಡಿಗೆ ಹಾಕಿದಾಗ" ಎಂಬ ಶೀರ್ಷಿಕೆಯ ಆ ಪತ್ರ ಪ್ರಕಟವಾಗಿ ನನಗೆ ಮತ್ತು ಕಾಲೇಜ್ ಹಾಸ್ಟೇಲ್ ನಲ್ಲಿ ನನ್ನ ಸಹಪಾಠಿಗಳಿಗೆಲ್ಲ ಅತೀವ ಸಂತಸ ತಂದಿತ್ತು. ಅಷ್ಟೇಅಲ್ಲ, ಒಂದುವಾರದೊಳಗೆ ನನಗೆ 50 ರೂಪಾಯಿಗಳ ಚೆಕ್ ಮತ್ತು ಆ ವಾರದ 'ಸುಧಾ' ಸಂಚಿಕೆಯ ಗೌರವಪ್ರತಿಯೊಂದನ್ನು ಅಂಚೆಯಲ್ಲಿ ಕಳಿಸಿದ್ದರು!

'ಸುಧಾ' ಕುರಿತು ಬಹುಶಃ ನಿಮ್ಮಲ್ಲೂ ಬಹಳಷ್ಟು ಸಿಹಿಸಿಹಿ ನೆನಪುಗಳಿರಬಹುದು. ಇದ್ದರೆ ಎಲ್ಲರೊಂದಿಗೆ ಹಂಚಿಕೊಳ್ಳಿ. ಆಸ್ಟ್ರೇಲಿಯಾದಲ್ಲಿರುವ Smitha Melkote ಎಂಬುವರು ಫೇಸ್ ಬುಕ್ ಗೋಡೆಯ ಮೇಲೆ "ನನ್ನ ನೆಚ್ಚಿನ ವಾರ ಪತ್ರಿಕೆಗೆ 50 ವರ್ಷ!! ನಾನು ಚಿಕ್ಕವಳಿದ್ದಾಗಿಂದ ಓದಿಕೊಂಡು, ಕನ್ನಡವನ್ನು ಕಲಿಯುತ್ತಾ, ಪ್ರೀತಿಸುತ್ತಾ ಬಂದಿದ್ದೇನೆ. ಇಂದಿಗೂ ನನ್ನ ಮನೆಯಂಗಳಕ್ಕೇ ಬರುತ್ತಿರುವ ನನ್ನ ನಲ್ಮೆಯ ಗೆಳತಿಗೆ ಶುಭಾಶಯಗಳು." ಎಂದು ಬರೆದಿದ್ದನ್ನು ಓದಿದ ಮೇಲೆ ನಾನು ಈ ಪೋಸ್ಟ್ ತಯಾರಿಸಿದೆ.

ಸ್ಮಿತಾ ಮೇಲುಕೋಟೆ ಅವರು ಆಸ್ಟ್ರೇಲಿಯಾದ ಮನೆಗೆ ಸುಧಾ ಮುದ್ರಿತ ಪ್ರತಿಯನ್ನು ತರಿಸುತ್ತಾರಂತೆ. ಸುಧಾ ಸ್ವರ್ಣ ಸಂಭ್ರಮ ಆರಂಭವಾಗಿ ಆಗಲೇ ಎರಡು ಸಂಚಿಕೆಗಳು ಹೊರಬಂದಿವೆ. ಬಹುಶಃ ಈ ವರ್ಷವಿಡೀ ಪ್ರತಿ ಸಂಚಿಕೆಯಲ್ಲೂ ಸ್ವರ್ಣಸಂಭ್ರಮದ ಒಂದೊಂದು ಕಂತು ಇರುತ್ತದೆಂದುಕೊಂಡಿದ್ದೇನೆ. ಮತ್ತೆ ವಾರವಾರವೂ ಸುಧಾ ಓದುವ ಪರಿಪಾಟ ನನ್ನದಾಗಲಿದೆ. ಸುಧಾ ಇ-ಆವೃತ್ತಿ ನಿಮಗೆ ಇಲ್ಲಿ ಉಚಿತವಾಗಿ ಸಿಗುತ್ತದೆ [ಒಮ್ಮೆ ನೋಂದಾವಣಿ ಮಾಡಿಕೊಳ್ಳಬೇಕು.]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sudha a popular household Kannada weekly magazine turns 50: Sudha a Kannada weekly magazine published in Bangalore since 1965, Jan 11 by The Printers (Mysore) Pvt. Ltd. Srivatsa Joshi recalls his intimate relation and joyful memorable moments in reading the Sudha Magazine

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more