ಕೊನೆಗೂ ಕಾಡಾನೆ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಸಜ್ಜು: ಅಧಿಕಾರಿಗಳಿಗೆ ಸಚಿವರ ಖಡಕ್ ಸೂಚನೆ
ಬೆಂಗಳೂರು, ಡಿಸೆಂಬರ್ 5: ಅರಣ್ಯದಂಚಿನ ಗ್ರಾಮಗಳಲ್ಲಿ ಜೀವ ಮತ್ತು ಬೆಳೆ ಹಾನಿ ಉಂಟು ಮಾಡುತ್ತಿರುವ ಕಾಡಾನೆ ಮತ್ತು ಕಾಡೆಮ್ಮೆ ಹಾವಳಿ ತಡೆಗೆ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಡಾನೆ ಹಾವಳಿಗೆ ಸದ್ಯದ ಸಾಬೀತಾದ ಪರಿಹಾರ, ರೈಲ್ವೆ ಬ್ಯಾರಿಕೇಡ್ ಅಳವಡಿಕೆಯಾಗಿದೆ. ಪ್ರತಿ ಕಿ.ಮೀ. ಬ್ಯಾರಿಕೇಡ್ ಅಳವಡಿಕೆಗೆ ಸುಮಾರು 1.50 ಕೋಟಿ ರೂ. ವೆಚ್ಚವಾಗುತ್ತಿದೆ. ಮಿಗಿಲಾಗಿ ರೈಲ್ವೆ ಹಳಿಗಳು ಸಿಗುವುದಿಲ್ಲ. ತಮಿಳುನಾಡಿನಲ್ಲಿ ಅಳವಡಿಸಿರುವ ಉಕ್ಕಿನ ಹಗ್ಗದ ತಡೆಗಳಿಗೆ (ಸ್ಟೀಲ್ ರೋಪ್) ಪ್ರತಿ ಕಿ.ಮೀ.ಗೆ 45 ಲಕ್ಷ ರೂ. ವೆಚ್ಚವಾಗುತ್ತದೆ ಎನ್ನಲಾಗದ್ದು, ಈ ಬಗ್ಗೆ ಪರಿಶೀಲಿಸಿ 10 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ತುಲನಾತ್ಮಕ ವರದಿಗೂ ಸೂಚನೆ
ರಾಜ್ಯದಲ್ಲಿ ಈಗಾಗಲೇ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಮುನ್ನ ಮತ್ತು ಅಳವಡಿಕೆ ನಂತರದ ಜೀವಹಾನಿ ಮತ್ತು ಬೆಳೆಹಾನಿ ಕುರಿತಂತೆ ತುಲನಾತ್ಮಕ ವರದಿ ಸಲ್ಲಿಸುವಂತೆಯೂ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಫಿನಾಡಲ್ಲಿ ಕಾಡಾನೆ ದಾಳಿಗೆ ಕೃಷಿಕ ಬಲಿ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮುಂದುವರೆದಿದೆ. ನರಸಿಂಹರಾಜಪುರ ತಾಲೂಕಿನ ಸೀತೂರು ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕನ ಮೇಲೆ ಒಂಟಿ ಕಾಡಾನೆ ಒಂದು ದಾಳಿ ನಡೆಸಿ ವಿಕೃತವಾಗಿ ಬಲಿ ಪಡೆದಿದೆ. ಆನೆ ದಾಳಿಗೆ ಉಮೇಶ್ (45) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಷಯ ತಿಳಿಯುತ್ತಿದಂತೆ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಉಪಟಳ ನೀಡುತ್ತಿರುವ ಕುರಿತು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೆರಡು ವರ್ಷದಲ್ಲಿ ಕಾಡಾನೆ ದಾಳಿಗೆ ಹತ್ತಾರು ಜೀವಗಳು ಬಲಿ ಪಡೆದಿದ್ದರೆ ಮತ್ತೊಂದೆಡೆ ಚಿಕ್ಕಮಗಳೂರು ತಾಲೂಕಿನಲ್ಲಿ ಬೀಟಮ್ಮ ಗ್ಯಾಂಗ್‌ನ ಉಪಟಳ ಮುಂದುವರೆದಿದೆ. ಈ ರೀತಿ ಅನೇಕ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಕಾಡಾನೆ ಉಪಟಳಕ್ಕೆ ಬೇಸತ್ತ ರೈತರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications