SSLC Examination-2 Timetable 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ ಹೀಗಿದೆ
ಬೆಂಗಳೂರು, ಮೇ, 11: ಈಗಾಗಲೇ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಮೇ 09ರಂದು ಪ್ರಕಟವಾಗಿದ್ದು, ಇದರ ಬೆನ್ನಲ್ಲೇ ಇದೀಗ ಅನುತ್ತೀರ್ಣರಾದವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಗಾದರೆ ಯಾವ್ಯಾವಾಗ ಯಾವ ವಿಷಯಗಳ ಪರೀಕ್ಷೆಗಳು ಇರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಇನ್ನೂ ಉತ್ತಮ ಅಂಕಗಳನ್ನು ಗಳಿಸಲು ಪರೀಕ್ಷಾ ಮಂಡಳಿ ಅವಕಾಶ ಮಾಡಿಕೊಟ್ಟಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ದಿನಾಂಕವನ್ನು ಪ್ರಕಟಿಸಲಾಗಿದ್ದು, ಜೂನ್ 7ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯದ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

SSLC ಪರೀಕ್ಷೆ-2ರ ವೇಳಾಪಟ್ಟಿ ವಿವರ
- ಜೂನ್ 7-2024: ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (ಎಸ್‌ಸಿಇಆರ್‌ಟಿ), ಸಂಸ್ಕೃತ
- ಜೂನ್ 8, 2024: ತೃತೀಯ ಭಾಷೆ-ಹಿಂದಿ ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ತೆಲುಗು, ಪರ್ಷಿಯನ್, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯೂಎಫ್
- ಜೂನ್ 10, 2024: ಗಣಿತ, ಸಮಾಜ ಶಾಸ್ತ್ರ
- ಜೂನ್ 11, 2024: ಅರ್ಥ ಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
- ಜೂನ್-12, 2024- ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
- ಜೂನ್ 13, 2024-ದ್ವಿತೀಯ ಭಾಷೆ (ಇಂಗ್ಲೀಷ್ ಹಾಗೂ ಕನ್ನಡ)
- ಜೂನ್ 14, 2024-ಸಮಾಜ ವಿಜ್ಞಾನ
ಜೂನ್ 15ರಂದು ಜೆಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುತ್ತದೆ. ವಿಷಯದ ಕೋಡ್ 15 ಮತ್ತು 60ರ ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಆಗುತ್ತವೆ.
ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5:15 ರವರೆಗೆ ನಿಗದಿಪಡಿಸಲಾಗಿದೆ. ಸದರಿ ವಿಷಯಗಳ ತಾತ್ವಿಕ ಪರೀಕ್ಷೆಯನ್ನು ಮಧ್ಯಾಹ್ನ 2:00 ಗಂಟೆಯಿಂದ ಮಧ್ಯಾಹ್ನ 3:45 ಗಂಟೆಯವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45 ರಿಂದ ಸಂಜೆ 5:15 ಗಂಟೆಯವರೆಗೆ ನಡೆಸಲಾಗುತ್ತದೆ.
ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಬರಹಗಾರರ ಸೌಲಭ್ಯ ಅಥವಾ ಹೆಚ್ಚುವರಿ ಸಮುಯದ ಅಥವಾ ಎರಡನ್ನೂ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿಗಳು ಮೂರು ಗಂಟೆಯ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷಗಳು, ಎರಡೂವರೆ ಗಂಟೆ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, ಎರಡು ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿಯಾಗಿ 30 ನಿಮಿಷಗಳನ್ನು ನೀಡಲಾಗುತ್ತದೆ.
ಪ್ರಥಮ ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳಿಗೆ ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ಮತ್ತು ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳಿಗೆ ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:15ರವರೆಗೆ ಅವಧಿ ನಿಗದಿಪಡಿಸಲಾಗಿದೆ.
ಪ್ರಥಮ ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆ ಬರೆಯಲು 3 ಗಂಟೆ ಮತ್ತು ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಹಾಗೂ ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆ ಬರೆಯಲು 2 ಗಂಟೆ 45 ನಿಮಿಷ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.
ಎನ್ಎಸ್‌ಕ್ಯೂಎಫ್ ವಿಷಯಗಳ ಪರೀಕ್ಷೆ ಬೆಳಗ್ಗೆ 10:15ರಿಂದ 12:30ರವರೆಗೆ ನಡೆಯಲಿದೆ. ಎನ್‌ಎಸ್‌ಕ್ಯೂಎಫ್ ವಿಷಯಗಳ ಪರೀಕ್ಷೆ ಬರೆಯಲು 2 ಗಂಟೆ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.












Click it and Unblock the Notifications