SSLC: ಪೋಷಕರು - ಶಿಕ್ಷಕರಿಗೆ ಕಿವಿಮಾತು; ಈ ತಪ್ಪು ಮಾಡಲೇಬೇಡಿ ಎಂದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ
SSLC: ಪೋಷಕರು - ಶಿಕ್ಷಕರಿಗೆ ಕಿವಿಮಾತು ಈ ತಪ್ಪು ಮಾಡಲೇಬೇಡಿ ಎಂದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಕಿವಿ ಮಾತು ಹೇಳಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಪರಿಶ್ರಮಕ್ಕೆ ಫಲ ಸಿಕ್ಕಿದೆ, ನಿಮ್ಮ ಪೋಷಕರ ಮುಖಗಳಲ್ಲಿ ಮಂದಹಾಸ ಮೂಡಿದೆ. ಎಸ್‌ಎಸ್‌ಎಲ್‌ಸಿ ದಾಟುತ್ತಲೇ ನೀವು ನಿಮ್ಮ ಕನಸುಗಳಿಗೆ ತೆರೆದುಕೊಳ್ಳುತ್ತೀರಿ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಮಯವಿದು. ಆತ್ಮವಿಶ್ವಾಸದಿಂದ ಮುಂದೆ ಹೆಜ್ಜೆ ಇಡುತ್ತಾ ಸಾಗಿ. ಕರ್ನಾಟಕಕ್ಕೆ ಹೆಮ್ಮೆ ತರುವ ಕಾರ್ಯವನ್ನು ಮಾಡುತ್ತಲೇ ಇರಿ.
ಪರೀಕ್ಷೆಯಲ್ಲಿ ಉತ್ತೀರ್ಣರಾಗದ, ಹೆಚ್ಚು ಅಂಕ ಪಡೆಯದ ಮಕ್ಕಳೂ ನೊಂದುಕೊಳ್ಳಬೇಕಿಲ್ಲ. ಒಂದು ಪರೀಕ್ಷೆಯಲ್ಲಿ ಬಂದ ಸೋಲು ನಿಮ್ಮ ಬದುಕಿನ ಸೋಲಲ್ಲ. ಇಂಥ ಪರೀಕ್ಷೆಗಳು ಬರುತ್ತಲೇ ಇರುತ್ತವೆ. ಮರಳಿ ಯತ್ನವ ಮಾಡುತ್ತಿರಬೇಕು.ಇದೊಂದು ಸಣ್ಣ ಅಡೆತಡೆ, ಒಂದು ಎಚ್ಚರಿಕೆಯ ಕರೆಗಂಟೆ ಎಂದುಕೊಳ್ಳಿ. ಸೋಲು ಎಂದರೆ ಅಂತ್ಯವಲ್ಲ, ಇನ್ನಷ್ಟು ಬಲವಾಗಿ ಹೋರಾಡು ಎಂಬ ಬದುಕಿನ ಸಂದೇಶ. ಗೆಲುವು ಎಲ್ಲರಿಗೂ ಸಿಗುತ್ತದೆ, ಆದರೆ ಸೋಲಿನ ಬಳಿಕ ಮತ್ತೆ ಎದ್ದು ನಿಲ್ಲುವವರ ಗೆಲುವು ಮಾತ್ರ ಇತಿಹಾಸವಾಗುತ್ತದೆ.

ಪ್ರಿಯ ಮಕ್ಕಳೇ, ಕಣ್ಣೀರು ಹಾಕಿ ಕುಳಿತುಕೊಳ್ಳಬೇಡಿ. ತಲೆ ತಗ್ಗಿಸುವ ಅಗತ್ಯವೂ ಇಲ್ಲ. ನಿಮ್ಮೊಳಗಿನ ಶಕ್ತಿಯನ್ನು ನೀವು ಇನ್ನೂ ಸಂಪೂರ್ಣವಾಗಿ ಅರಿತಿಲ್ಲ. ಇಂದು ಸೋತವರು ನಾಳೆ ಯಾರೂ ಏರದ ಎತ್ತರಕ್ಕೆ ಏರಬಹುದು. ಇಂದು ಜಾರಿ ಬಿದ್ದವರು ನಾಳೆ ಸಾವಿರ ಮಂದಿಗೆ ದಾರಿ ತೋರಿಸಬಹುದು. ಸೋಲು ಎನ್ನುವುದು ಗೆಲುವಿನ ಮೆಟ್ಟಿಲು. ಆ ಮೆಟ್ಟಿಲಿನ ಮೇಲೆ ಕಾಲಿಟ್ಟು ಮೇಲಕ್ಕೆ ಏರಬೇಕು, ಅದೇ ಧೈರ್ಯ, ಅದೇ ವಿವೇಕ.
ನಿಮಗೆ ಮರು ಪರೀಕ್ಷೆ ಇದ್ದೇ ಇದೆ. ಬದುಕು ಮತ್ತೆ ಮತ್ತೆ ಅವಕಾಶಗಳನ್ನು ಕೊಡುತ್ತಿರುತ್ತದೆ. ಈಗ ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳುವ ಕಾಲ. ಮತ್ತೆ ಸೊನ್ನೆಯಿಂದ ಆರಂಭಿಸಿ. ನಿಮ್ಮ ಪಠ್ಯದ ಮೇಲಷ್ಟೇ ನಿಮ್ಮ ಗಮನವಿರಲಿ. ನಿಮ್ಮ ಮೇಲೆ ನೀವು ನಂಬಿಕೆ ಇಟ್ಟ ಕ್ಷಣದಿಂದಲೇ ಗೆಲುವು ಆರಂಭವಾಗುತ್ತದೆ. ಲೋಕವೇ ನಿಮ್ಮನ್ನು ಅನುಮಾನಿಸಿದರೂ ನೀವು ನಿಮ್ಮನ್ನು ಅನುಮಾನಿಸಿಕೊಳ್ಳಬೇಡಿ.
ಪೋಷಕರಿಗೆ, ಶಿಕ್ಷಕರಿಗೂ ನನ್ನ ಕಿವಿಮಾತು. ಸೋತ ಮಕ್ಕಳಿಗೆ ಗದರಬೇಡಿ, ಅವರ ಜೊತೆ ಗಟ್ಟಿಯಾಗಿ ನಿಲ್ಲಿ. ಒತ್ತಡಗಳನ್ನು ಹೇರುವ ಬದಲು ಆತ್ಮವಿಶ್ವಾಸ ಮೂಡಿಸಿ. ಇತರ ಮಕ್ಕಳೊಂದಿಗೆ ಹೋಲಿಸುವ ಬದಲು ಪ್ರೋತ್ಸಾಹದ ನುಡಿಗಳನ್ನು ಆಡಿ. ನಿಮ್ಮ ಒಂದು ಸಾಂತ್ವನದ ಮಾತು ಅವರನ್ನು ದೊಡ್ಡ ಎತ್ತರಕ್ಕೆ ಏರಿಸಬಹುದು.
ಮಕ್ಕಳೇ, ನೆನಪಿಟ್ಟುಕೊಳ್ಳಿ. ಬಿದ್ದವನೇ ಎದ್ದು ಓಡಲು ಕಲಿಯುತ್ತಾನೆ. ಕತ್ತಲನ್ನು ಕಂಡವನೇ ಬೆಳಕಿನ ಮೌಲ್ಯ ತಿಳಿಯುತ್ತಾನೆ. ಸೋಲನ್ನು ಕಂಡವನೇ ಗೆಲುವಿನ ಸಿಹಿ ಅರಿಯುತ್ತಾನೆ. ಧೈರ್ಯ ನಿಮ್ಮದಾದರೆ ಭವಿಷ್ಯವೂ ನಿಮ್ಮದೇ. ಮುನ್ನುಗ್ಗಿ. ಜಯ ನಿಮ್ಮನ್ನು ಕಾಯುತ್ತಿದೆ.












Click it and Unblock the Notifications