SIR ಕರಡು ಮತದಾರರ ಪಟ್ಟಿ ಬಿಡುಗಡೆ: 1.07 ಕೋಟಿ ಹೆಸರುಗಳಿಗೆ ಕೊಕ್; 43.84 ಲಕ್ಷ ಮಂದಿಗೆ ನೋಟಿಸ್
ಬೆಂಗಳೂರು: ರಾಜ್ಯದ ಜನರು ಎದುರು ನೋಡುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಕರಡು ಮತದಾರರ ಪಟ್ಟಿ ಇಂದು (ಆ.24) ಬಿಡುಗಡೆಯಾಗಲಿದೆ. ಕರಡು ಪಟ್ಟಿ ಪ್ರಕಟವಾದ ಬಳಿಕ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಮನೆ ಮನೆ ಸಮೀಕ್ಷೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುತ್ತಿದೆ.
ರಾಜ್ಯದಲ್ಲಿ ಒಟ್ಟು 5.55 ಕೋಟಿ ಎನಮ್ಯೂರೇಷನ್ ಫಾರಂಗಳನ್ನು ವಿತರಿಸಿ, ಮತದಾರರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯಂತೆ ಸುಮಾರು 4.34 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟವಾಗಲಿವೆ. ಆದರೆ, ಸುಮಾರು 1.07 ಕೋಟಿ ಮತದಾರರನ್ನು ASDD (Absent, Shifted, Dead, Duplicate) ಎಂದು ಗುರುತಿಸಲಾಗಿದ್ದು, ಅವರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ.

ಮ್ಯಾಪಿಂಗ್ ಆಗದಿರುವ ರಾಜ್ಯದ ಸುಮಾರು43.84 ಲಕ್ಷ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಬೆಂಗಳೂರಿನಲ್ಲೇ ಸುಮಾರು 23 ಲಕ್ಷ ಮತದಾರರು ನೋಟಿಸ್ ಪಡೆಯಲಿದ್ದಾರೆ. ನೋಟಿಸ್ ಪಡೆದವರು ತಾವು ಅರ್ಹ ಮತದಾರರು ಎಂಬುದನ್ನು ಸೂಕ್ತ ದಾಖಲೆಗಳ ಮೂಲಕ ಸಾಬೀತುಪಡಿಸಬೇಕಾಗುತ್ತದೆ.
ನೋಟಿಸ್ ಜಾರಿಯಾದ ಬಳಿಕ ಸಂಬಂಧಪಟ್ಟ ಮತದಾರರ ಸ್ಥಳ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಪರಿಶೀಲನೆ ನಡೆಯಲಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಮತದಾರರ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ನೋಟಿಸ್ ಪಡೆದವರು **7 ದಿನಗಳೊಳಗೆ ಪ್ರತಿಕ್ರಿಯೆ ನೀಡಿ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.
ಯಾರಿಗೆ ನೋಟಿಸ್?
* ಮ್ಯಾಪಿಂಗ್ ಆಗದೇ ಇರುವ ಮತದಾರರಿಗೆ ನೋಟಿಸ್
* ಮತದಾರರ ಸ್ಥಳ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೋಟಿಸ್ ಜಾರಿ
* ನೋಟಿಸ್ ಬಳಿಕ ಅಧಿಕಾರಿಗಳಿಂದ ಪರಿಶೀಲನೆ
* ತಾವು ಅರ್ಹ ಮತದಾರರು ಎಂಬುದನ್ನು ಸಾಬೀತುಪಡಿಸಬೇಕು
* ನೋಟಿಸ್‌ಗೆ ಪ್ರತಿಕ್ರಿಯಿಸುವಾಗ ಸೂಕ್ತ ದಾಖಲೆ ಸಲ್ಲಿಸಬೇಕು
* ಚುನಾವಣಾ ಆಯೋಗ ಸೂಚಿಸಿರುವ 12 ದಾಖಲೆಗಳ ಪೈಕಿ ಅಗತ್ಯವಿರುವ ಒಂದು ದಾಖಲೆಯನ್ನು ಸಲ್ಲಿಸಬಹುದು
* ನೋಟಿಸ್ ಪಡೆದ 7 ದಿನಗಳೊಳಗೆ ಪ್ರತಿಕ್ರಿಯೆ ನೀಡಬೇಕು
ಹೆಸರು ಪರಿಶೀಲಿಸುವುದು ಹೇಗೆ?
ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬಹುದು. ಚುನಾವಣಾ ಆಯೋಗದ ವೆಬ್‌ಸೈಟ್, ಸಂಬಂಧಪಟ್ಟ ಬಿಎಲ್‌ಒ ಕಚೇರಿಗಳು ಹಾಗೂ ಇತರ ಅಧಿಕೃತ ವೇದಿಕೆಗಳಲ್ಲಿ ಕರಡು ಪಟ್ಟಿ ಲಭ್ಯವಾಗಲಿದೆ. ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ಅಥವಾ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳಲ್ಲಿ ದೋಷ ಕಂಡುಬಂದರೆ ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಕರಡು ಮತದಾರರ ಪಟ್ಟಿ ಪ್ರಕಟವಾದ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಹರಾಗಿರುವವರು ಫಾರಂ-6 ಮೂಲಕ ಅರ್ಜಿ ಸಲ್ಲಿಸಬಹುದು. ಹೀಗಾಗಿ, ಕರಡು ಪಟ್ಟಿ ಪ್ರಕಟವಾದ ಬಳಿಕ ಹೊಸದಾಗಿ ಮತದಾರರ ಸೇರ್ಪಡೆ, ಹೆಸರು ತಿದ್ದುಪಡಿ ಹಾಗೂ ಆಕ್ಷೇಪಣೆಗಳ ಪ್ರಕ್ರಿಯೆ ನಡೆಯಲಿದ್ದು, ಇದರಿಂದ ಪ್ರಸ್ತುತ ಡಿಲೀಟ್ ಆಗಿರುವ ಮತದಾರರ ಸಂಖ್ಯೆಯಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ.


Click it and Unblock the Notifications
