ಸಿದ್ದರಾಮಯ್ಯಗೆ ಎಐಸಿಸಿ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ: ಸಿಎಂ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ?
ರಾಜ್ಯ ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ, ಸಿಎಂ ಬದಲಾವಣೆ ವಿಚಾರದ ಚರ್ಚೆ ಕಾವು ಪಡೆದಿರುವಾಗಲೇ ಮಹತ್ವದ ಬೆಳವಣಿಗೆ ನಡೆದಿದೆ. ಐದು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರು ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. ಇದೀಗ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ರಾಷ್ಟ್ರ ರಾಜಕಾರಣದತ್ತ ಕರೆದೊಯ್ಯುವ ಸೂಚನೆ ದಟ್ಟವಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರನ್ನು ಎಐಸಿಸಿ ಒಬಿಸಿ ಸಲಹಾ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಹೌದು, ಕರ್ನಾಟಕದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಸಿದ್ದರಾಮಯ್ಯ ಅವರನ್ನ ಅಹಿಂದ ನಾಯಕ ಎಂದೂ ಕರೆಯಲಾಗುತ್ತದೆ. ಇನ್ನು ಹಿಂದುಳಿದ ಸಮುದಾಯಗಳು ಬೆಂಬಲವೂ ಸಿದ್ದರಾಮಯ್ಯ ಅವರಿಗೆ ಅಪಾರವಾಗಿದೆ. ಈ ಹಿನ್ನೆಲೆ ಮುಂದಿನ ಚುನಾವಣೆಗಳಿಗೆ ಕಾಂಗ್ರೆಸ್ ಒಬಿಸಿ ಮತಗಳನ್ನು ಸೆಳೆಯಲು ಈಗಿನಿಂದಲೇ ಕಸರತ್ತು ನಡೆಸಿದ್ದು, ಸಿದ್ದರಾಮಯ್ಯ ಅವರನ್ನು ದಿಢೀರ್ ಎಐಸಿಸಿ ಒಬಿಸಿ ಸಲಹಾ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಎಐಸಿಸಿ ಮಟ್ಟದಲ್ಲಿ ಸಿದ್ದರಾಮಯ್ಯ ಅವರಿಗೆ ಈ ಮಹತ್ವದ ಸ್ಥಾನ ನೀಡಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಲು ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದೂ ಹೇಳಲಾಗುತ್ತಿದೆ. ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದಕ್ಕಾಗಿ ಅವರು ಬಿಡುವಿಲ್ಲದೆ ಕಸರತ್ತು ನಡೆಸುತ್ತಲೇ ಇದ್ದಾರೆ. ಹೈಕಮಾಂಡ್‌ಗೆ ಆಗಾಗ ಹೋಗಿ ಬರುತ್ತಲೇ ಇದ್ದಾರೆ. ಆದರೂ ಅವರ ಕನಸು ಈಡೇರುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಇನ್ನು ಸಿದ್ದರಾಮಯ್ಯ ಅವರನ್ನು ಏಕಾಏಕಿ ಸಿಎಂ ಕುರ್ಚಿಯಿಂದ ಕೆಳಗಿಳಿಸಿದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂಬ ಕಾರಣಕ್ಕೆ ಸೈಲೆಂಟಾಗಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣದತ್ತ ಕರೆಸಿಕೊಳ್ಳುವ ತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರಾಗಿ ಸಿದ್ದರಾಮಯ್ಯ ಅವರನ್ನ ನೇಮಕ ಮಾಡಿದ್ದು, ಇದನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ನಿರ್ಧರಿಸಿದೆ. ಅಲ್ಲದೆ ಜುಲೈ 15ರಂದು ಬೆಂಗಳೂರಿನಲ್ಲೇ ಈ ಮಂಡಳಿಯ ಸಭೆ ಕೂಡ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿರುವ ಭಾರತ್ ಜೋಡೊ ಭವನದಲ್ಲಿ ಈ ಒಬಿಸಿ ಮಂಡಳಿಯ ಮೊದಲ ಸಭೆ ನಡೆಯಲಿದೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಎಐಸಿಸಿ ಮಟ್ಟದಲ್ಲಿ ಒಬಿಸಿ ಕಮಿಟಿಯಲ್ಲಿ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು ನನಗೆ ಈ ವಿಚಾರವೇ ಗೊತ್ತಿಲ್ಲ, ನಾನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡೆ ಎಂದಿದ್ದಾರೆ. ಇನ್ನು ಈ ವಿಚಾರವಾಗಿ ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿ ಸುದ್ದಿ ಬಂದಿದೆ. ಒಬಿಸಿ ಸಮುದಾಯಗಳ ಸಭೆ ಮಾಡಿ ಎಂದು ಎಐಸಿಸಿ ಹೇಳಿತ್ತು. ಅದರಂತೆ 15 ರಂದು ಕರ್ನಾಟಕದಲ್ಲಿ ರಾಷ್ಟ್ರೀಯ ಸಭೆ ನಿಗದಿ ಮಾಡಿದ್ದೇನೆ. ಇನ್ನು ಪಕ್ಷ ಜವಾಬ್ದಾರಿ ಕೊಟ್ಟಾಗ ಓಡಿಹೋಗಲು ಆಗುತ್ತಾ? ನಾನು ಇದನ್ನು ಅವರ ಬಳಿ ಕೇಳಲಿಲ್ಲ. ಅವರೇ ಈ ಬಗ್ಗೆ ಘೋಷಿಸಿದ್ದಾರೆ. ಇದು ರಾಷ್ಟ್ರ ರಾಜಕಾರಣವೇನಲ್ಲ. ಈ ಬಗ್ಗೆ ಇನ್ನೂ ನನಗೆ ಗೊತ್ತಿಲ್ಲ, ವಿಚಾರಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಐಸಿಸಿಯ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸದಸ್ಯರಾಗಿ ನನ್ನನ್ನು ನೇಮಕ ಮಾಡಲಾಗಿದೆ. ಮಾಧ್ಯಮಗಳು ಇದನ್ನು ತಪ್ಪಾಗಿ ಅರ್ಥೈಸಿ ಮಂಡಳಿಯ ಅಧ್ಯಕ್ಷರಾಗಿ ನನ್ನ ನೇಮಕ ಮಾಡಲಾಗಿದೆ ಎಂದು ವರದಿ ಮಾಡಿವೆ. ಇದು ತಪ್ಪು ಮಾಹಿತಿ. ಸಲಹಾ ಮಂಡಳಿ ಸಭೆ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ 50 ಮಂದಿ ಭಾಗವಹಿಸುವ ಈ ಸಭೆಯ ಆತಿಥ್ಯವನ್ನು ನಾನು ವಹಿಸಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications