Rice Price: ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಒಂದೇ ತಿಂಗಳಲ್ಲಿ ಅಕ್ಕಿ ಬೆಲೆ ವಿಪರೀತ ಏರಿಕೆ, ಜೇಬಿಗೆ ಕತ್ತರಿ
ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಈಗ ಅಕ್ಕಿ ಬೆಲೆಯೂ ಸಹ ಜನಸಾಮಾನ್ಯರ ಕೈಗೆಟುಕದಂತೆ ದುಬಾರಿಯಾಗುತ್ತಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಪ್ರತಿ ಕೆಜಿ ಅಕ್ಕಿಯ ಬೆಲೆಯಲ್ಲಿ ಬರೋಬ್ಬರಿ 11ರಿಂದ 13 ರೂಪಾಯಿಗಳಷ್ಟು ಭಾರಿ ಹೆಚ್ಚಳವಾಗಿದ್ದು, ಇದರ ಎಫೆಕ್ಟ್ ಗ್ರಾಹಕರ ಮಾಸಿಕ ಬಜೆಟ್ ಮೇಲೆ ಬಿದ್ದಿದೆ.
ಕೇವಲ 15 ದಿನಗಳಲ್ಲೇ ಎರಡು ಬಾರಿ ದರ ಹೆಚ್ಚಳ
ಮಾರುಕಟ್ಟೆಯ ಇತ್ತೀಚಿನ ವರದಿಗಳ ಪ್ರಕಾರ, ಕೇವಲ ಹದಿನೈದು ದಿನಗಳ ಹಿಂದಷ್ಟೇ ಪ್ರತಿ ಕೆಜಿ ಅಕ್ಕಿಯ ಬೆಲೆಯ ಮೇಲೆ 6 ರೂಪಾಯಿ ಹೆಚ್ಚಿಸಲಾಗಿತ್ತು. ಆ ಬೆಲೆ ಏರಿಕೆಯ ಆಘಾತದಿಂದ ಗ್ರಾಹಕರು ಚೇತರಿಸಿಕೊಳ್ಳುವ ಮುನ್ನವೇ, ಈಗ ವ್ಯಾಪಾರಿಗಳು ವಿವಿಧ ತಳಿಯ ಅಕ್ಕಿಗಳ ಬೆಲೆ ಮತ್ತೆ 5 ರೂಪಾಯಿಯಷ್ಟು ಏರಿಸಿದ್ದಾರೆ. ಇದರ ನೇರ ಪರಿಣಾಮವಾಗಿ 26 ಕೆಜಿ ತೂಕದ ಒಂದು ಅಕ್ಕಿ ಚೀಲದ ಬೆಲೆ ಬರೋಬ್ಬರಿ 160 ರೂಪಾಯಿವರೆಗೆ ದುಬಾರಿಯಾಗಿದೆ.

ಅಕ್ಕಿ ಬೆಲೆ ದಿಢೀರ್ ಹೆಚ್ಚಾಗಲು ಪ್ರಮುಖ ಕಾರಣಗಳೇನು?
ಈ ಬೆಲೆ ಏರಿಕೆಯ ಹಿಂದೆ ಕೇವಲ ಸ್ಥಳೀಯ ಕಾರಣಗಳಷ್ಟೇ ಅಲ್ಲದೆ ಜಾಗತಿಕ ಮತ್ತು ನೀತಿ ಆಧಾರಿತ ಪ್ರಮುಖ ಅಂಶಗಳು ಕೂಡ ಪಾತ್ರ ವಹಿಸಿವೆ. ಸರ್ಕಾರದ ದೇಶೀಯ ಮತ್ತು ಅಂತರರಾಷ್ಟ್ರೀಯ ಅಕ್ಕಿ ರಫ್ತು ನೀತಿಗಳಲ್ಲಿ ಆಗಿರುವ ಇತ್ತೀಚಿನ ಮಾರ್ಪಾಡುಗಳು ದೇಶೀಯ ಮಾರುಕಟ್ಟೆಯ ಮೇಲೆ ತೀವ್ರ ಪ್ರಭಾವ ಬೀರಿದ್ದು, ಅಕ್ಕಿ ಕೊರತೆ ಮತ್ತು ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ.
ತೈಲ ದರಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ, ಸರಕು ಸಾಗಣೆ ವೆಚ್ಚ ಕೂಡ ಹೆಚ್ಚಾಗಿದೆ. ಈ ಹೆಚ್ಚುವರಿ ಸಾಗಣೆ ವೆಚ್ಚದ ಹೊರೆಯನ್ನು ಅಂತಿಮವಾಗಿ ಗ್ರಾಹಕರ ಮೇಲೆಯೇ ಹಾಕಲಾಗುತ್ತಿದೆ. ಜಾಗತಿಕ ಯುದ್ಧದ ಪರಿಣಾಮವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಧನ ಮತ್ತು ತೈಲ ದರಗಳು ಸ್ಥಿರತೆ ಕಳೆದುಕೊಂಡಿದ್ದು, ಪರೋಕ್ಷವಾಗಿ ಇದರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೂ ಬೀರಿದೆ.
ಯಾವೆಲ್ಲ ಅಕ್ಕಿ ದುಬಾರಿ?
ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಮತ್ತು ಜನಪ್ರಿಯವಾಗಿರುವ ಎಲ್ಲಾ ಪ್ರಮುಖ ತಳಿಯ ಅಕ್ಕಿಗಳ ಬೆಲೆಯೂ ಈಗ ಗಗನಕ್ಕೇರಿದೆ. ಪ್ರಮುಖವಾಗಿ ಸೋನಾ ಮಸೂರಿ, ಸ್ಟೀಮ್ ಅಕ್ಕಿ, ಕೋಲಂ ಅಕ್ಕಿ, ರಾ ರೈಸ್ ದರಗಳು ಹೆಚ್ಚಾಗಿವೆ. ಮಧ್ಯಮ ಮತ್ತು ಬಡ ಕುಟುಂಬಗಳ ದೈನಂದಿನ ಆಹಾರದ ಮುಖ್ಯ ಮೂಲವಾಗಿರುವ ಅಕ್ಕಿಯ ಬೆಲೆ ಹೀಗೆ ಒಂದೇ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿರುವುದು ಸಾರ್ವಜನಿಕ ವಲಯದಲ್ಲಿ ಕಳವಳಕ್ಕೆ ಕಾರಣವಾಗಿದೆ.
ಯಾರಿಗೆಲ್ಲ ಪೆಟ್ಟು
ದಿನನಿತ್ಯದ ಅಡುಗೆಗೆ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಸೋನಾ ಮಸೂರಿ ಮತ್ತು ಸ್ಟೀಮ್ ಅಕ್ಕಿಯನ್ನು ಅತಿ ಹೆಚ್ಚು ಬಳಸಲಾಗುತ್ತದೆ. ಸಾಮಾನ್ಯವಾಗಿ ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ 25ರಿಂದ 30 ಕೆಜಿ ಅಕ್ಕಿ ಬೇಕಾಗುತ್ತದೆ. ಈಗ ಕೇವಲ ಒಂದು ತಿಂಗಳಲ್ಲೇ ಒಂದು ಚೀಲದ ಮೇಲೆ ಬರೋಬ್ಬರಿ 160 ರೂಪಾಯಿಯಷ್ಟು ಹೆಚ್ಚಳವಾಗಿರುವುದರಿಂದ, ತಿಂಗಳ ದಿನಸಿ ಬಜೆಟ್‌ನಲ್ಲಿ ದಿಢೀರ್ ಏರಿಕೆಯಾಗಿದೆ. ಇದು ಹಬ್ಬ ಹರಿದಿನಗಳು ಆರಂಭವಾಗುವ ಮುನ್ನವೇ ಗ್ರಾಹಕರಿಗೆ ದೊಡ್ಡ ಹೊಡೆತ ನೀಡಿದೆ.
ಕೇವಲ ಮನೆಗಳಷ್ಟೇ ಅಲ್ಲದೆ ಹೋಟೆಲ್, ರೆಸ್ಟೋರೆಂಟ್ ಹಾಗೂ ಮದುವೆ ಮುಂತಾದ ಶುಭ ಸಮಾರಂಭಗಳ ಕ್ಯಾಟರಿಂಗ್ ಉದ್ಯಮದ ಮೇಲೂ ಇದು ಗಂಭೀರ ಪರಿಣಾಮ ಬೀರಲಿದೆ. ಮುಂಬರುವ ದಿನಗಳಲ್ಲಿ ಹೋಟೆಲ್‌ಗಳಲ್ಲಿ ಊಟ, ತಿಂಡಿಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಇಂಧನ ದರ ಸತತವಾಗಿ ಏರುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಇತರ ದಿನಬಳಕೆ ವಸ್ತುಗಳಾದ ಬೇಳೆಕಾಳುಗಳು ಮತ್ತು ಎಣ್ಣೆಯ ಬೆಲೆಯೂ ಹೆಚ್ಚಾಗಬಹುದು ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ.













Click it and Unblock the Notifications