ನೇಮಕಾತಿ ವಿವಾದ: ಪೊಲೀಸ್ ಪರೀಕ್ಷೆ ವೇಳಾಪಟ್ಟಿಗೆ ಯತ್ನಾಳ್ ಆಕ್ರೋಶ, ಕನ್ನಡ ಶಿಕ್ಷಕರ ಹುದ್ದೆ; ಕರವೇ ಎಚ್ಚರಿಕೆ
Recruitment Row: ಪೊಲೀಸ್ ಇಲಾಖೆಯಲ್ಲಿ ಏಕಕಾಲಕ್ಕೆ ಎರಡು ಪರೀಕ್ಷೆಗಳು ನಡೆಯುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಉಳಿಕೆ ಮೂಲ ವೃಂದದ 3,395 ಮತ್ತು ಸ್ಥಳೀಯ ವೃಂದದ 596 ಪೊಲೀಸ್ ಕಾನ್ಸ್‌ಟೇಬಲ್ (sivil) ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದೇ ದಿನ ನಡೆಸುತ್ತಿರುವುದು ಎರಡೂ ಹುದ್ದೆಗಳಿಗೆ ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಪ್ರಾಧಿಕಾರಕ್ಕೆ ಕಿಂಚಿತ್ತಾದರೂ ಸಾಮಾನ್ಯ ಜ್ಞಾನವಿದ್ದರೆ ಈ ರೀತಿಯಾದ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಅವೈಜ್ಞಾನಿಕ ಪರೀಕ್ಷೆ ವೇಳಾಪಟ್ಟಿಯಿಂದ (Unscientific Examination Scheduling) ಪರೀಕ್ಷಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಪರೀಕ್ಷಾರ್ಥಿಗಳ ಹಿತವನ್ನು ಕಾಪಾಡಿಕೊಂಡು ಪರೀಕ್ಷೆ ವೇಳಾಪಟ್ಟಿ ರಚಿಸಬೇಕೇ ಹೊರತು, ಯಾವುದೋ ಒಂದು ಭಾನುವಾರ ಪರೀಕ್ಷೆ ನಡೆಸಿ ಕೈ ತೊಳೆದುಕೊಳ್ಳೋಣ ಎಂಬ ಪ್ರಾಧಿಕಾರದ ವರ್ತನೆ ಖಂಡನೀಯ. ಪರೀಕ್ಷೆಗೆ ಹಗಲಿರುಳು ಕಷ್ಟಪಟ್ಟು ಓದಿಕೊಂಡಿರುವ ಪರೀಕ್ಷಾರ್ಥಿಗಳಿಗೆ ಇದು ತೀವ್ರ ಹಿನ್ನಡೆಯಾಗಲಿದೆ. ಅವರ ಭವಿಷ್ಯ ಡೋಲಾಯಮಾನವಾಗಲಿದೆ. ಮತ್ತೊಮ್ಮೆ ಪರೀಕ್ಷೆ ಎದುರಿಸಲು ಅವರಿಗೆ ವಯೋಮಿತಿಯ ಸಮಸ್ಯೆ ಎದುರಾಗುತ್ತದೆ. ಪ್ರಾಧಿಕಾರವು ಕೂಡಲೇ ಯಾವುದಾದರು ಒಂದು ಪರೀಕ್ಷೆಯನ್ನು ಮುಂದೆ ಹಾಕಿ ಪರೀಕ್ಷಾರ್ಥಿಗಳ ಹಿತವನ್ನು, ಭವಿಷ್ಯವನ್ನು ಕಾಪಾಡಲಿ ಎಂದು ಆಗ್ರಹಿಸಿದ್ದಾರೆ.

Recruitment Row: ಕನ್ನಡ ಶಿಕ್ಷಕರ ನೇಮಕಾತಿ: ಕರವೇ ಆಕ್ರೋಶ
ಕನ್ನಡ ಶಿಕ್ಷಕರ ನೇಮಕಾತಿ ಕರ್ನಾಟಕ ರಕ್ಷಣಾ ವೇದಿಕೆ ಸಹ ಸಿಡಿದೆದ್ದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನೇರವಾಗಿ ಹೇಳುತ್ತಿದ್ದೇನೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಆಗದೆ ಹೋದರೆ ಇದಕ್ಕೆ ಕಾರಣಕರ್ತ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಇದರಲ್ಲಿ ಯಾವ ಮುಲಾಜು ಇಲ್ಲ. ಬೇಕಿದ್ದರೆ ಈಗಲೇ ಪೊಲೀಸ್ ಭದ್ರತೆ ಪಡೆದುಕೊಂಡು ಬಿಡಿ. ನೀವು ನಿಮ್ಮ ಕಚೇರಿಗಳಿಗೆ ಕಾಲಿಡಲು ನಾವು ಬಿಡುವುದಿಲ್ಲ ಎಂದಿದ್ದಾರೆ.
ಕನ್ನಡ ಭಾಷೆಯ ಪಾಠ ವನ್ನು ಸಮಾಜ ವಿಜ್ಞಾನ ಬೋಧಕರಿಂದ ಮಾಡಿಸುತ್ತಾರಂತೆ. ಕನ್ನಡ ಐಚ್ಚಿಕ ತೆಗೆದುಕೊಂಡು ಪದವಿ ಮಾಡಿದವರು ಏನು ಮಾಡಬೇಕು? ಆ ಲಕ್ಷಾಂತರ ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳಬೇಕೆ. ಇವತ್ತು, ನಾಳೆ ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಅವಕಾಶ ಇದೆಯಂತೆ. ನಾನು ಬಹಿರಂಗವಾಗಿಯೇ ಆಕ್ಷೇಪಣೆ ಸಲ್ಲಿಸುತ್ತಿದ್ದೇನೆ. ಇದನ್ನು ಅವರು ಆಕ್ಷೇಪಣೆ ಎಂದಾದರೂ ಭಾವಿಸಲಿ ಅಥವಾ, ಎಚ್ಚರಿಕೆ, ಬೆದರಿಕೆ ಎಂದಾದರೂ ಭಾವಿಸಲಿ. ಕನ್ನಡ ಶಿಕ್ಷಕರಿಗೆ ಅನ್ಯಾಯವಾದರೆ ಇದಕ್ಕೆ ಕಾರಣಕರ್ತರು ಕರ್ನಾಟಕದ ನೆಲದಲ್ಲಿ ಓಡಾಡಲು ಬಿಡುವುದಿಲ್ಲ ಎಂದಿದ್ದಾರೆ.
ಕನ್ನಡ ಐಚ್ಛಿಕ ವಿಷಯದಲ್ಲಿ ಪದವಿ, ಬಿ.ಎಡ್., ಟಿಇಟಿ ಸೇರಿದಂತೆ ಅಗತ್ಯ ವಿದ್ಯಾರ್ಹತೆಗಳನ್ನು ಪಡೆದು ವರ್ಷಗಳಿಂದ ಶಿಕ್ಷಕರ ನೇಮಕಾತಿಗಾಗಿ ಕಾಯುತ್ತಿರುವ ಲಕ್ಷಾಂತರ ಕನ್ನಡ ಪದವೀಧರರು ಏನು ತಪ್ಪು ಮಾಡಿದ್ದಾರೆ? ಅವರಿಗೆ ಯಾಕೆ ಈ ಅನ್ಯಾಯ? ಈ ದ್ರೋಹವನ್ನು ನಾವು ಸಹಿಸುವುದಿಲ್ಲ. ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಮಾನ್ಯ ಮುಖ್ಯಮಂತ್ರಿಗಳಿಗೆ ಈ ದುಷ್ಟ ಹುನ್ನಾರದ ಮಾಹಿತಿ ಇಲ್ಲವೇ? ಅಥವಾ ಅಧಿಕಾರಿಗಳ ಕೈಗೆ ಎಲ್ಲ ಅಧಿಕಾರವನ್ನು ಕೊಟ್ಟು ಕೂರಿಸಲಾಗಿದೆಯೇ?
ಸರ್ಕಾರಕ್ಕೂ ನನ್ನ ಎಚ್ಚರಿಕೆ, ಮೊದಲು ಆಗಿರುವ ಅನಾಹುತ ಸರಿಪಡಿಸಿ. ಇಲ್ಲವಾದಲ್ಲಿ ಇದರ ಪರಿಣಾಮವನ್ನು ನೀವೂ ಕೂಡ ಅನುಭವಿಸಬೇಕಾದೀತು. ಕನ್ನಡದ ಕೊಲೆ ನಡೆಯುತ್ತಿರುವಾಗ ಸರ್ಕಾರವೂ ನಮ್ಮ ಪಾಲಿಗೆ ಸತ್ತ ಸರ್ಕಾರವೇ ಆಗಿರುತ್ತದೆ, ನೆನಪಿಟ್ಟುಕೊಳ್ಳಿ ಎಂದೂ ಅವರು ಹೇಳಿದ್ದಾರೆ.


Click it and Unblock the Notifications
