ರಾಜ್ಯಸಭಾ ಚುನಾವಣೆ: ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಗೇಮ್ ಪ್ಲಾನ್..!
ಬೆಂಗಳೂರು, ಜೂನ್ 09: ಕರ್ನಾಟಕದಲ್ಲಿ ರಾಜ್ಯಸಭೆ ಚುನಾವಣೆ ಕಣ ರಂಗೇರಿದೆ. ಬಿಜೆಪಿ ಎರಡು ಸ್ಥಾನ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ನಾಲ್ಕನೇ ಸ್ಥಾನಕ್ಕಾಗಿ ಮೂರು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ ಜಿದ್ದಿಗೆ ಬಿದ್ದಿವೆ. ಆದರೆ ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿ ತನ್ನದೇ ಗೆಲುವು ಎಂದು ಬೀಗುತ್ತಿದೆ. ಬಿಜೆಪಿಯ ಲೆಕ್ಕಚಾರವೇನು ಅನ್ನೋದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ಕರ್ನಾಟಕ ವಿಧಾಸಭೆಯಲ್ಲಿ ಬಿಜೆಪಿಯ ಬಳಿಯಲ್ಲಿ 122 ಶಾಸಕರಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿ ನಿರ್ಮಲಾ ಸೀತರಾಮನ್ ಮತ್ತು ಜಗ್ಗೇಶ್‌ರನ್ನು ಕಣಕ್ಕಿಳಿಸಿದೆ. ಇಬ್ಬರು ಅಭ್ಯರ್ಥಿಗಳು ಗೆಲುವನ್ನು ಸಾಧಿಸಲು ತಲಾ 45 ಮತಗಳ ಅವಶ್ಯವಿದೆ. ಈ ಇಬ್ಬರ ಗೆಲುವಿಗೆ 90 ಮತಗಳು ಬೇಕಾಗಲಿದೆ. ಇನ್ನುಳಿದಂತೆ 32 ಮತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತೊರ್ವ ಅಭ್ಯರ್ಥಿ ಲೇಹರ್ ಸಿಂಗ್‌ರನ್ನು ಬಿಜೆಪಿ ನಾಲ್ಕನೇ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ.
ಕಾಂಗ್ರೆಸ್ ತನ್ನ ಬಳಿಯಲ್ಲಿ 70 ಶಾಸಕರನ್ನು ಹೊಂದಿದ್ದು. ಕಾಂಗ್ರೆಸ್‌ನ ಜೈರಾಮ್ ರಮೇಶ್ ಸುಲಭವಾಗಿ 45 ಮತಗಳನ್ನು ಪಡೆದು ಗೆಲುವನ್ನು ಪಡೆಯಲಿದ್ದಾರೆ. ಕಾಂಗ್ರೆಸ್ ಬಳಿಯಲ್ಲಿ ಆಗ ಉಳಿಯುವುದು ಕೇವಲ 25 ಮತಗಳು ಮಾತ್ರವೇ. ಆದರೂ ಕಾಂಗ್ರೇಸ್ ಸಹ ತನ್ನ ಪಕ್ಷದಿಂದ ಮನ್ಸೂರ್ ಅಲಿಖಾನ್‌ರನ್ನು ಕಣಕ್ಕಿಳಿಸಿದೆ. ಜೆಡಿಎಸ್ ತನ್ನ ಬಳಿಯಲ್ಲಿ 32 ಶಾಸಕರನ್ನು ಹೊಂದಿದ್ದು. ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದೆ. ಕುಪೇಂದ್ರ ರೆಡ್ಡಿ ಗೆಲುವು ಸಾಧಿಸಲು 13 ಶಾಸಕರ ಮತಗಳ ಕೊರತೆಯನ್ನು ಎದುರಿಸುತ್ತಿದ್ದಾರೆ.

ಬಿಜೆಪಿ, ಜೆಡಿಎಸ್ ಮೊದಲ ಪ್ರಾಶಸ್ತ್ಯದ ಮತ ಸಮಬಲ
ನಾಲ್ಕನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್‌ಗೆ ಶಾಸಕರ ಸಂಖ್ಯೆ ಸಮಬಲವಾಗಿದೆ. ಆದರೆ ನಾಲ್ಕನೇ ಅಭ್ಯರ್ಥಿಯ ಗೆಲುವಿಗೆ ಶಾಸಕರ ಕೊರತೆಯಂತೂ ಇದೆ. ಇದರಿಂದಾಗಿಯೇ ಜೆಡಿಎಸ್ ಕಾಂಗ್ರೆಸ್‌ಗೆ ಮೈತ್ರಿಯ ಆಫರ್ ನೀಡುತ್ತಿದೆ. ಆದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಗೆ ಜೆಡಿಎಸ್ ಬೆಂಬಲಿಸಲಿ ಎನ್ನುತ್ತಿದೆ. ಬಿಜೆಪಿ ಮಾತ್ರ ಕಾಂಗ್ರೆಸ್ ಜೆಡಿಎಸ್ ಕಿತ್ತಾಟದ ಲಾಭವನ್ನು ಪಡೆದು ಎರಡನೇ ಪ್ರಾಶಸ್ತ್ಯದ ಲೆಕ್ಕಾಚಾರದಲ್ಲಿ ತನ್ನ ಗೆಲುವನ್ನು ಖಾತರಿ ಪಡಿಸಿಕೊಳ್ಳುತ್ತಿದೆ.

ಎರಡನೇ ಪ್ರಾಶಸ್ತ್ಯದ ಮತದಲ್ಲಿ ಬಿಜೆಪಿ ಅಭ್ಯರ್ಥಿಗೆ ಅದೃಷ್ಟ
ರಾಜ್ಯಸಭೆಗೆ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಂದು ಮತ(ಒಬ್ಬರು ಶಾಸಕರ ಮತ) ಲೆಕ್ಕಾಚಾರವನ್ನು 45000 ಎಂದು ಲೆಕ್ಕ ಹಾಕಲಾಗುತ್ತದೆ. ಇನ್ನು ಎರಡನೇ ಪ್ರಾಶಸ್ತ್ಯದ ಮತವನ್ನು 19000 ಎಂದು ಲೆಕ್ಕಾಚಾರ ಹಾಕಲಾಗುತ್ತದೆ. ಬಿಜೆಪಿಯ ಲೇಹರ್ ಸಿಂಗ್ ರವರಿಗೆ 32 ಶಾಸಕರ ಮೊದಲ ಪ್ರಾಶಸ್ತ್ಯದ ಮತ ಬೀಳಲಿದೆ. ಇನ್ನುಳಿದಂತೆ ಎರಡನೇ ಪ್ರಾಶಸ್ತ್ಯದ ಮತದಲ್ಲಿ ಬಿಜೆಪಿಯ ಶಾಸಕರು ಹೆಚ್ಚಿರುವ ಹಿನ್ನೆಲೆಯಲ್ಲಿ ಲೇಹರ್ ಸಿಂಗ್ ಸುಲಭವಾಗಿ ಗೆಲುವನ್ನು ಸಾಧಿಸುವ ಲೆಕ್ಕಾಚಾರದಲ್ಲಿದೆ ಬಿಜೆಪಿ ಪಕ್ಷ.

ಜೆಡಿಎಸ್ ಕಾಂಗ್ರೆಸ್ ಜಗಳ ಬಿಜೆಪಿಗೆ ಲಾಭ
ಜೆಡಿಎಸ್ ಸಹ 32 ಶಾಸಕರ ಮೊದಲ ಪ್ರಾಶಸ್ತ್ಯದ ಮತಗಳು ಮಾತ್ರವಿದ್ದು ಜೆಡಿಎಸ್‌ಗೆ ಎರಡನೇ ಪ್ರಾಶಸ್ತ್ಯದ ಮತವಿಲ್ಲ. ಜೆಡಿಎಸ್ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವನ್ನು ಸಾಧಿಸಲು ಪರಸ್ಪರರಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್‌ನ ಮೈತ್ರಿ ಅತ್ಯಂತ ಅವಶ್ಯವಾಗಿ ಬೇಕಾಗಿದೆ. ಈ ಎರಡು ಪಕ್ಷಗಳು ನೇರ ಮೈತ್ರಿಯೋ ಹಿಂಬಾಗಿಲ ಮೈತ್ರಿಯನ್ನೋ ಮಾಡಿಕೊಳ್ಳದಿದ್ದರೇ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲಿದೆ.

ಮೂರು ಪಕ್ಷಕ್ಕೂ ಕ್ರಾಸ್ ವೋಟಿಂಗ್ ಭೀತಿ
ರಾಜ್ಯಸಭಾ ಚುನಾವಣೆಯ ನಾಲ್ಕನೇ ಅಭ್ಯರ್ಥಿಯಾಗಿ ಅಖಾಡದಲ್ಲಿರುವವರೆಲ್ಲಾ ಕುಬೇರರೇ. ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮಗೆ ಅಗತ್ಯವಿರುವ ಹೆಚ್ಚುವರಿ ಮತವನ್ನು ಕೊಂಡುಕೊಳ್ಳುವ ಮೂಲಕ (ಕುದುರೆ ವ್ಯಾಪಾರ) ಸರಿದೂಗಿಸಿಕೊಳ್ಳಬಹುದು. ಮೂರು ಪಕ್ಷದ ಅಭ್ಯರ್ಥಿಯ ಹಣೆಬರಹವನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಕುದುರೆ ವ್ಯಾಪರಕ್ಕಿದ್ದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತಮ್ಮ ಶಾಸಕರು ಕ್ರಾಸ್ ಓಟಿಂಗ್ ಮಾಡದಂತೆ ನೋಡಿಕೊಳ್ಳಬೇಕಿದೆ.












Click it and Unblock the Notifications