ಮೆನು ಆನ್ ರೈಲ್ : ನಿಮಗೆ ಪ್ರಿಯವಾದ ಆಹಾರ ರೈಲಿನಲ್ಲಿ ಲಭ್ಯ
ಬೆಂಗಳೂರು, ಏಪ್ರಿಲ್ 25: ರೈಲ್ವೆ ಪ್ರಯಾಣಿಕರಿಗೆ ಕುಳಿತ ಸ್ಥಳದಿಂದಲೇ ಇಷ್ಟದ ತಿಂಡಿ, ತಿನಿಸುಗಳನ್ನು ಒದಗಿಸಲು ರೈಲ್ವೆ ಇಲಾಖೆ ಮೆನು ಆನ್ ರೈಲ್ ಎಂಬ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ.
ಈ ವಿಶಿಷ್ಟ ಆ್ಯಪ್ ಮೂಲಕ ಪ್ರಯಾಣಿಕರು ತಾವು ಪ್ರಯಾಣಿಸುತ್ತಿರುವ ರೈಲುಗಳಲ್ಲಿ ದೊರೆಯುವ ಆಹಾರದ ಮಾಹಿತಿಯನ್ನು ಬೆರೆಳ ತುದಿಯಲ್ಲೇ ಪಡೆಯಬಹುದಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ಅಪ್ಲಿಕೇಷನ್ ಬಳಕೆಗೆ ದೊರೆಯಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಗುಣಮಟ್ಟದ ಆಹಾರ ಒದಗಿಸುವ ದೃಷ್ಟಿಯಿಂದ ಈ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಅದರ ಮೂಲಕವೇ ಪ್ರಯಾಣಿಕರು ತಮ್ಮಿಷ್ಟದ ಆಹಾರ ಪಡೆದು ಸೇವಿಸಲು ಅನುಕೂಲ ಕಲ್ಪಿಸಲಾಗುತ್ತಿದೆ. ಮೇ ವೇಳೆ ಈ ಅಪ್ಲಿಕೇಷನ್ ಬಳಕೆಗೆ ಲಭ್ಯವಾಗಲಿದೆ ಎಂಬ ನಿರೀಕ್ಷೆ ಇದೆ.

ಪ್ರಯಾಣಿಕರು ಮೆನು ಆನ್ ರೈಲ್ ಆ್ಯಪ್ ಮೇಲ್, ಎಕ್ಸ್ ಪ್ರೆಸ್, ಶತಾಬ್ಧಿ ಎಕ್ಸ್ ಪ್ರೆಸ್ ಮತ್ತು ದುರಂತೋ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಂಚರಿಸುವ ವೇಳೆ ತಮ್ಮ ಇಷ್ಟದ ಆಹಾರವನ್ನು ಅಪ್ಲಿಕೇಷನ್ ಮೂಲಕ ಆಯ್ಕೆ ಮಾಡಬಹುದು.
ಬೇರೆ ಬೇರೆ ರೈಲುಗಳಲ್ಲಿ ಯಾರ ರೀತಿಯ ಆಹಾರ ಲಭ್ಯವಿದೆ ಎಂಬ ಮೆನು ಈ ಆ್ಯಪ್ ನಲ್ಲಿ ಕಾಣಸಿಗಲಿದೆ. ಅಷ್ಟೇ ಅಲ್ಲ ಪ್ರಯಾಣಿಕರ ಬೇಡಿಕೆಗಯ ಆಹಾರಕ್ಕೆ ಇಲಾಖೆಯಿಂದ ವಿಧಿಸಲಾಗುವ ದರದ ಮಾಹಿತಿಯನ್ನೂ ಅಪ್ಲಿಕೇಷನ್ ನಲ್ಲಿ ಅಳವಡಿಸಲಾಗುತ್ತಿದೆ.
ಹೆಚ್ಚಿನ ದರಕ್ಕೆ ಕಡಿವಾಣ: ರೈಲುಗಳಲ್ಲಿ ಆಹಾರ ಒದಗಿಸುವ ಸಿಬ್ಬಂದಿ, ಪ್ರಯಾಣಿಕರಿಂದ ನಿಗದಿಗಿಂತ ಹೆಚ್ಚಿನ ದರ ವಸೂಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಪಾಯಿಂಟ್ ಆಫ್ ಸೇಲ್ ಬಿಲ್ಲಿಂಗ್ ಯಂತ್ರ ಬಳಕೆಗೆ ಮುಂದಾಯಿತು. ಇದರಿಂದ ಆಹಾರ ಒದಗಿಸುವ ಗುತ್ತಿಗೆ ಪಡೆದ ಸಂಸ್ಥೆಯವರು ಪ್ರಯಾಣಿಕರನ್ನು ಸುಲಿಗೆ ಮಾಡುವುದು ನಿಯಂತ್ರಣಕ್ಕೆ ಬಂದಿದೆ.












Click it and Unblock the Notifications