ರಫೆಲ್ ವಿಮಾನ ಖರೀದಿ ದೇಶದ ದೊಡ್ಡ ಹಗರಣ : ರಣದೀಪ್ ಸುರ್ಜಿವಾಲಾ
ಬೆಂಗಳೂರು, ಏಪ್ರಿಲ್ 30 : '36 ರಫೆಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಬಹುದೊಡ್ಡ ಹಗರಣ ನಡೆದಿದೆ' ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ರಣದೀಪ್ ಸುರ್ಜಿವಾಲಾ ಆರೋಪಿಸಿದರು.
ಸೋಮವಾರ ರಣದೀಪ್ ಸುರ್ಜಿವಾಲಾ ಮತ್ತು ಎಐಸಿಸಿ ಕಾರ್ಯದರ್ಶಿ ಅಮಿತ್ ದೇಶಮುಖ್ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸುವುದು ಮೋದಿಯವರ ಏಕಪಕ್ಷೀಯ ನಿರ್ಧಾರವಾಗಿತ್ತು. ಇದರಿಂದಾಗಿ ದೇಶದ ಮೇಲೆ ಆದ ದುಷ್ಪರಿಣಾಮ ಆಗಿದೆ' ಎಂದರು.
'ಸರಕಾರವು 7.5 ಶತಕೋಟಿ ಯೂರೋ ಕೊಟ್ಟು 36 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಲು ಮುಂದಾಗಿದ್ದೇನೋ ಸರಿ. ಆದರೆ, ಈ ವ್ಯವಹಾರದಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಈ ಬಗ್ಗೆ ಏನನ್ನೂ ಮಾತನಾಡದೆ ಮೋದಿ ವಿಷಯಾಂತರ ಮಾಡುತ್ತಿದ್ದಾರೆ' ಎಂದು ದೂರಿದರು.

'ಮೋದಿಯವರಿಗೆ ನಿಜಕ್ಕೂ ಮೇಕ್ ಇನ್ ಇಂಡಿಯಾ ಯೋಜನೆಯ ಬಗ್ಗೆ ನಿಜವಾದ ಆಸಕ್ತಿ ಇದ್ದಿದ್ದರೆ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಈ ಯುದ್ಧ ವಿಮಾನ ನಿರ್ಮಾಣದ ಹೊಣೆಯನ್ನು ಅವರು ವಹಿಸಬೇಕಾಗಿತ್ತು. ಹೀಗೆ ಮಾಡಿದ್ದಿದ್ದರೆ, ಕರ್ನಾಟಕದ ಆರ್ಥಿಕತೆಗೆ 35,000 ಕೋಟಿ ರೂ.ಗಳಷ್ಟು ಬೃಹತ್ ಬಂಡವಾಳ ಹರಿದುಬರುತ್ತಿತ್ತಲ್ಲದೆ, ಸಾವಿರಾರು ಉದ್ಯೋಗಗಳೂ ಸೃಷ್ಟಿಯಾಗುತ್ತಿದ್ದವು' ಎಂದು ಹೇಳಿದರು.
'ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದು ಮೋದಿಯವರ ಏಕಪಕ್ಷೀಯ ನಿರ್ಧಾರವಾಗಿತ್ತು. ಇದರಿಂದಾಗಿ ದೇಶದ ಮೇಲೆ ಆದ ದುಷ್ಪರಿಣಾಮಗಳು ಆಗಿವೆ. ರಫೇಲ್ ಯುದ್ಧ ವಿಮಾನಗಳ ನಿಜವಾದ ಖರೀದಿ ಬೆಲೆ ಎಷ್ಟು ಎನ್ನುವುದನ್ನು ಇದುವರೆಗೂ ಮುಚ್ಚಿಡಲಾಗಿದೆ. ಸಂಪುಟ ಸಮಿತಿಯಿಂದ ಪೂರ್ವಾನುಮತಿ ಪಡೆದಿಲ್ಲ. ಎಚ್ಎಎಲ್ ಗೆ ತಂತ್ರಜ್ಞಾನ ವರ್ಗಾವಣೆ ಮಾಡದೆ, ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಡಲಾಗಿದೆ' ಎಂದರು.
'ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ 2012ರ ಡಿಸೆಂಬರ್ 12ರಂದು ಅಂತಾರಾಷ್ಟ್ರೀಯ ಬಿಡ್ ಆರಂಭವಾಯಿತು. ಆಗ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವಿತ್ತು. ಈ ಬಿಡ್ ಪ್ರಕಾರ, ಒಂದು ರಫೇಲ್ ಯುದ್ಧ ವಿಮಾನದ ಬೆಲೆ 526.10 ಕೋಟಿ ರೂ.ಗಳಾಗಿತ್ತು. ಅಂದರೆ, 36 ಯುದ್ಧ ವಿಮಾನಗಳಿಗೆ ಒಟ್ಟು ಬೆಲೆ 18,940 ಕೋಟಿ ರೂ.ಗಳಾಗುತ್ತಿತ್ತು. ಆದರೆ, ಇದನ್ನು ಬದಲಿಸಿದ ಮೋದಿ ಸರಕಾರವು 7.5 ಶತಕೋಟಿ ಯೂರೋಗಳನ್ನು ಕೊಟ್ಟು ಈ ವಿಮಾನಗಳನ್ನು ಖರೀದಿಸಲು ತೀರ್ಮಾನಿಸಿತು' ಎಂದು ವಿವರಣೆ ನೀಡಿದರು.
'ಯುಪಿಎ ಸರಕಾರವು 126 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು 2012ರ ಡಿ.12ರಂದು ಅಂತಾರಾಷ್ಟ್ರೀಯ ಬಿಡ್ ಆಹ್ವಾನಿಸಿದಾಗ, ಅದು ಬೆಂಗಳೂರಿನಲ್ಲಿರುವ ಎಚ್ಎಎಲ್ ಗೆ ತಂತ್ರಜ್ಞಾನವನ್ನು ವರ್ಗಾಯಿಸಬೇಕು, ಎನ್ನುವ ಕರಾರನ್ನು ಒಳಗೊಂಡಿತ್ತು. ಅಲ್ಲದೆ, 36,000 ಕೋಟಿ ರೂ. ಬೆಲೆ ಬಾಳುವ 108 ರಫೇಲ್ ಯುದ್ಧ ವಿಮಾನಗಳನ್ನು ಎಚ್ಎಎಲ್‍ನಲ್ಲೇ ತಯಾರಿಸಲು ಒಪ್ಪತಕ್ಕದ್ದು ಎನ್ನುವ ಅಂಶವೂ ಅದರಲ್ಲಿತ್ತು' ಎಂದರು.












Click it and Unblock the Notifications