ಪೊಲೀಸ್ ಠಾಣೆ ಸೆಲ್‌ನಲ್ಲಿ ಕಾಲು ಮೇಲೆ ಕಾಲು ಹಾಕ್ಕೊಂಡು ಕೂತ ಪಿಎಸ್ಐ ಕೇಸ್ ಕಿಂಗ್‌ಪಿನ್ !
ಕಲಬುರಗಿ, ಏ. 25: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಿಂಗ್ ಪಿನ್ ಆರ್. ಡಿ. ಪಾಟೀಲ್ ಪೊಲೀಸ್ ಠಾಣೆಯ ಸೆಲ್‌ನಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ಕೂತು ವಿವಾದಕ್ಕೀಡಾಗಿದ್ದಾನೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್. ಡಿ. ಪಾಟೀಲ್ ಶನಿವಾರ ಪುಣೆಯಲ್ಲಿ ಸಿಐಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಬಂಧನದ ವೇಳೆ ಮಾಧ್ಯಮಗಳಿಗೆ ಫೋಸ್ ಕೊಟ್ಟಿದ್ದ ಅರ್.ಡಿ. ಪಾಟೀಲ್, ನನಗೆ ಫ್ರೀ ಪಬ್ಲಿಸಿಟಿ ಕೊಡ್ತಿದ್ದೀರಾ ? ಕೊಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅವಾಜ್ ಬಿಟ್ಟಿದ್ದ. ಈತನನ್ನು ಕಲಬುರಗಿಯ ಎಂ.ಬಿ. ನಗರದ ಪೊಲೀಸ್ ಠಾಣೆಯಲ್ಲಿಡಲಾಗಿದೆ.
ಆರ್. ಡಿ. ಪಾಟೀಲ್ ಗೆ ರಾಜಾತಿಥ್ಯ: ಆರ್. ಡಿ. ಪಾಟೀಲ್ ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್. ಈತನನ್ನು ಸೆಲ್‌ನಲ್ಲಿ ಕೂಡಿ ಹಾಕಿದಾಗ ಪೊಲೀಸರಿಗೆ ಆತನಿಗೆ ಕುಳಿತುಕೊಳ್ಳಲು ಚೇರ್ ಕೊಟ್ಟಿದ್ದಾರೆ. ಆತ ಎಂ.ಬಿ. ನಗರದ ಸೆಲ್‌ನಲ್ಲಿ ಚೇರ್ ಮೇಲೆ ಕೂರುವ ಬದಲಿಗೆ ಕಾಲು ಮೇಲೆ ಕಾಲು ಹಾಕಿಕೊಂಡು ಪೊಲೀಸರಿಗೆ ಫೋಸ್ ಕೊಟ್ಟಿದ್ದು, ಈ ಕುರಿತ ಪೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಆರ್.ಡಿ. ಪಾಟೀಲ್ ಕಾಲು ಮೇಲೆ ಕಾಲು ಹಾಕಿಕೊಂಡು ಸೆಲ್‌ನಲ್ಲಿ ಕೂತಿದ್ದು, ತನ್ನನ್ನು ಯಾರೂ ಏನೂ ಮಾಡಲಾಗದು ಎಂಬ ಸಂದೇಶ ರವಾನಿಸಿದ್ದಾನೆ. ಈತನ ಪಕ್ಕದಲ್ಲಿಯೇ ಮಲ್ಲುಗೌಡ ಪಾಟೀಲ್ ಕೈ ಕಟ್ಟಿ ನಿಂತಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಇದೆಲ್ಲವೂ ನಡೆದಿದೆ. ಇದು ಇದೀಗ ಪೊಲೀಸ್ ಇಲಾಖೆಯಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ನಿನ್ನೆಯಷ್ಟೇ ಮಾಧ್ಯಮಗಳ ಎದುರು ಅವಾಜ್ ಬಿಟ್ಟಿದ್ದ ರುದ್ರಗೌಡ ಪಾಟೀಲ್, ಪೊಲೀಸ್ ಠಾಣೆಯ ಸೆಲ್‌ನಲ್ಲಿ ತನ್ನ ದೌಲತ್ತು ತೋರಿದ್ದಾನೆ. ಈ ಕುರಿತ ಪೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಬ್ಲೂಟೂತ್ ಉಪಕರಣ ಕೊಟ್ಟು ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಪ್ರಕರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್. ಈತನ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದಾಗ 34 ಕ್ಕೂ ಹೆಚ್ಚು ಮಂದಿಗೆ ಸರ್ಕಾರಿ ನೌಕರಿ ಕೊಡಿಸಿರುವ ಆಘಾತಕಾರಿ ಸಂಗತಿ ಹೊರ ಬಿದ್ದಿತ್ತು. ಈತನ ಮನೆಯಲ್ಲಿ ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸದಿಂತೆ ಹಾಲ್ ಟಿಕೆಟ್ ಗಳು ಸಿಕ್ಕಿದ್ದವು. ಇಷ್ಟಾಗಿಯೂ ಸಿಐಡಿ ತನಿಖೆಗೆ ರುದ್ರಗೌಡ ಪಾಟೀಲ್ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.












Click it and Unblock the Notifications