Inspiring story: ಒಂದೇ ಮನೆಯ ಅಕ್ಕ- ತಂಗಿಯ ದೇಶಪ್ರೇಮ! ಒಟ್ಟಿಗೆ BSF ಸೇರಿ ದೇಶ ಸೇವೆಗೆ ನಿಂತ ಬೆಳಗಾವಿಯ ವೀರ ವನಿತೆಯರು

ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ವೀರ ಸೇನಾನಿಗಳನ್ನ ನಾಡಿಗೆ ನೀಡಿದ ಬೆಳಗಾವಿ ಜಿಲ್ಲೆ ಶೌರ್ಯ ಮತ್ತು ಸಾಹಸಕ್ಕೆ ಇನ್ನೊಂದು ಹೆಸರು. ಇದೀಗ ಅದೇ ಕುಂದಾನಗರಿಯ ಇಬ್ಬರು ವೀರ ವನಿತೆಯರು ದೇಶದ ಗಡಿ ಕಾಯುವ ಮೂಲಕ ಇಡೀ ರಾಜ್ಯವೇ ಹೆಮ್ಮೆಪಡುವಂತಹ ಅಸಾಧಾರಣ ಸಾಧನೆ ಮಾಡಿದ್ದಾರೆ.

ಬೆಳಗಾವಿ ಬಿಎಸ್ಎಫ್ ಸಹೋದರಿಯರು ಎಂದೇ ಇದೀಗ ಪ್ರೀತಿಯಿಂದ ಕರೆಯಲ್ಪಡುತ್ತಿರುವ ಖಡಕ್ ಗಲ್ಲಿಯ ಸ್ವರಾಂಜಲಿ ಜಾಧವ ಹಾಗೂ ಗೀತಾಂಜಲಿ ಜಾಧವ ಅವರು ಗಡಿ ಭದ್ರತಾ ಪಡೆಯಲ್ಲಿ (BSF) ಒಟ್ಟಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಕಠಿಣ ತರಬೇತಿ ಮತ್ತು ಅಪಾರ ಶಿಸ್ತಿನಿಂದ ಅವರು ಈ ಸಾಧನೆ ಮಾಡಿದ್ದು, ಹೆಣ್ಣುಮಕ್ಕಳು ಕೂಡ ಸೈನ್ಯಯಲ್ಲಿ ಹೋರಾಡಬಹುದು ಎಂದು ನಿರೂಪಿಸಿದ್ದಾರೆ.

Proud Belagavi Sisters Swaranjali and Geetanjali Jadhav Create History Serving the Nation in BSF

ಬಾಲ್ಯದ ಕನಸನ್ನು ನನಸು

ಮಹಿಳೆಯರು ಕೇವಲ ಮನೆಗೆ ಮಾತ್ರ ಸೀಮಿತವಲ್ಲ, ಅವರು ದೇಶದ ಗಡಿ ಕಾಯಲು ಕೂಡ ಸೈ ಎಂಬುದನ್ನ ಈ ಅಕ್ಕ-ತಂಗಿ ಇಬ್ಬರು ಸಾಬೀತುಪಡಿಸಿದ್ದಾರೆ. 25 ವರ್ಷದ ಸ್ವರಾಂಜಲಿ ಹಾಗೂ 23 ವರ್ಷದ ಗೀತಾಂಜಲಿ ಕಳೆದ ಮೂರು ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶೇಷವೆಂದರೆ, ಇವರಿಬ್ಬರೂ ಒಟ್ಟಿಗೆ ಆಯ್ಕೆಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಇವರ ತಂದೆ ಶಿವಾಜಿ ಜಾಧವ ಅವರು ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಾಯಿ ಶುಭದಾ ಅವರು ಗೃಹಿಣಿಯಾಗಿದ್ದು, ತಮ್ಮ ಇಬ್ಬರು ಹೆಣ್ಣುಮಕ್ಕಳ ಈ ಸಾಧನೆಯ ಬಗ್ಗೆ ತೀವ್ರ ಹೆಮ್ಮೆ ಹೊಂದಿದ್ದಾರೆ. ಹೆಣ್ಣುಮಕ್ಕಳನ್ನ ಕೇವಲ ಮದುವೆ ಮಾಡಿ ಕಳುಹಿಸಬೇಕು ಎಂದು ಯೋಚಿಸುವ ಸಮಾಜಕ್ಕೆ ಈ ಪೋಷಕರು ಮಾದರಿಯಾಗಿದ್ದಾರೆ.

ಸೇನೆ ಸೇರಲು ಸ್ಫೂರ್ತಿಯಾದ ವಾತಾವರಣ

ಈ ಸಹೋದರಿಯರಿಗೆ ಸೇನೆ ಸೇರುವ ಕನಸು ಇದ್ದಕ್ಕಿದ್ದಂತೆ ಬಂದಿದ್ದಲ್ಲ ನೋಡಿ. ಬಾಲ್ಯದಲ್ಲಿಯೇ ಸೈನಿಕರ ಸಮವಸ್ತ್ರ ತೊಟ್ಟು ಸಂಭ್ರಮಿಸುತ್ತಿದ್ದ ಇವರಿಗೆ ತಮ್ಮ ಮನೆಯೇ ಬಹುದೊಡ್ಡ ಪ್ರೇರಣೆಯಾಗಿತ್ತು. ಇವರ ಅಜ್ಜ ಮಾಜಿ ಸೈನಿಕರಾಗಿದ್ದ ಸದಾಶಿವ ಜಾಧವ ಅವರು ತಮ್ಮ ಮೊಮ್ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಭಕ್ತಿಯ ಬೀಜ ಬಿತ್ತಿದ್ದರು. ಅವರು ಹೇಳುತ್ತಿದ್ದ ಯುದ್ಧದ ಕಥೆಗಳು ಹಾಗೂ ಸೈನಿಕರ ಸಾಹಸಗಾಥೆಗಳನ್ನ ಕೇಳುತ್ತಲೇ ಇವರು ಬೆಳೆದರು.

ಇದರ ಜೊತೆಗೆ, ಇವರ ಚಿಕ್ಕಪ್ಪ ಅಶೋಕ ಜಾಧವ ಹಾಗೂ ಸೋದರಮಾವ ಮಾರುತಿ ಕಾಕತಕರ್ ಕೂಡ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದವರು. ಹೀಗಾಗಿ, ಮನೆಯಲ್ಲಿ ಸದಾಕಾಲ ತುಂಬಿದ್ದ ದೇಶಭಕ್ತಿಯ ವಾತಾವರಣ ಈ ಕುವರಿಯರು ಬೆಳೆಯುತ್ತಲೇ ತಾವೂ ಸೈನ್ಯ ಸೇರಬೇಕು ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿತು.

ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆ

ಸಾಮಾನ್ಯವಾಗಿ ಬಿಎಸ್ಎಫ್ ತರಬೇತಿ ಅತ್ಯಂತ ಕಠಿಣವಾಗಿರುತ್ತದೆ. ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಕಠಿಣ ಪರೀಕ್ಷೆಗಳನ್ನ ಎದುರಿಸಿ ಗಡಿ ಭದ್ರತಾ ಪಡೆಯನ್ನ ಸೇರುವುದು ಸುಲಭದ ಮಾತಲ್ಲ. ಆದರೆ, ಸ್ವರಾಂಜಲಿ ಮತ್ತು ಗೀತಾಂಜಲಿ ತಮ್ಮ ಛಲ, ಪರಿಶ್ರಮ ಹಾಗೂ ನಿರಂತರ ಶಿಸ್ತಿನ ಮೂಲಕ ಎಲ್ಲಾ ಅಡೆತಡೆಗಳನ್ನ ಮೀರಿ ನಿಂತರು.

ಇದೀಗ ಕಳೆದ ಮೂರು ವರ್ಷಗಳಿಂದ ಬಿಸಿಲು, ಮಳೆ, ಚಳಿ ಎನ್ನದೇ ದೇಶದ ಗಡಿಯಲ್ಲಿ ಶತ್ರುಗಳ ವಿರುದ್ಧ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ.

ಇವರ ಈ ಸಾಧನೆ ಕೇವಲ ಜಾಧವ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಬೆಳಗಾವಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಹೆಣ್ಣುಮಕ್ಕಳು ಯಾವುದೇ ಕ್ಷೇತ್ರದಲ್ಲಿಯೂ ಪುರುಷರಿಗಿಂತ ಕಡಿಮೆಯಿಲ್ಲ ಎಂಬುದನ್ನ ಸಾಬೀತುಪಡಿಸಿರುವ ಈ ಬೆಳಗಾವಿ ಬಿಎಸ್ಎಫ್ ಸಹೋದರಿಯರು ಇಂದಿನ ಯುವ ಪೀಳಿಗೆಗೆ, ಅದರಲ್ಲೂ ವಿಶೇಷವಾಗಿ ರಕ್ಷಣಾ ವಲಯಕ್ಕೆ ಸೇರಬಯಸುವ ಯುವತಿಯರಿಗೆ ಸ್ಫೂರ್ತಿ ಎನ್ನಬಹುದು. ನಾಡಿನ ಕೀರ್ತಿಯನ್ನು ಗಡಿಯಾಚೆಗೂ ಪಸರಿಸಿದ ಇವರ ಸೇವೆ ಸದಾ ಹೀಗೆಯೇ ಮುಂದುವರಿಯಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+