Property Good News: ರಾಜ್ಯದ ಬಡವರಿಗೆ 4 ರಿಂದ 5 ಸಾವಿರ ನಿವೇಶನ ಹಂಚಿಕೆ: ಜಿ.ಪರಮೇಶ್ವರ
ಮೈಸೂರು: ಕರ್ನಾಟಕ ರಾಜ್ಯ ಸರ್ಕಾರವು ಶೀಘ್ರವೇ ರಾಜ್ಯದ ಪ್ರತಿ ಕ್ಷೇತ್ರಗಳಲ್ಲಿ ಬಡವರಿಗೆ 4 ರಿಂದ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಈ ವೇಳೆ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸಿದ ಗ್ರಾಮಸ್ಥರಿಗೂ ನಿವೇಶನ ನೀಡಲಾಗುವುದು ಎಂದು ಕಂದಾಯ ಸಚಿವರೂ ಆಗಿರುವ ಡಿಸಿಎಂ ಡಾ.ಜಿ.ಪರಮೇಶ್ವರ ಅವರು ಗುಡ್‌ನ್ಯೂಸ್ ಕೊಟ್ಟರು.
2 ದಿನಗಳ ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ ಅವರು ಇಂದು ಕೆ.ಆರ್.ನಗರ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಸರ್ಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಜನರು ಅರ್ಜಿಗಳ ಸಲ್ಲಿಕೆ ಕುರಿತು ಮಾತನಾಡಿದರು.

ನಿವೇಶನ ಹಂಚಿಕೆ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ರಾಜ್ಯದ ಪ್ರತಿ ಕ್ಷೇತ್ರಗಳಲ್ಲಿ ಬಡವರಿಗೆ 4 ರಿಂದ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಅದರಂತೆ ಕೆ.ಆರ್.ನಗರ ಕ್ಷೇತ್ರದಲ್ಲೂ ಗ್ರಾಮ ಸಭೆಗಳ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಅಂಬೇಡ್ಕರ್ ಭವನಕ್ಕೆಹೆಚ್ಚುವರಿ ಅನುದಾನ ಭರವಸೆ
ಇನ್ನೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ನಗರದಲ್ಲಿ ಅಂಬೇಡ್ಕರ್ ಭವನದ ನಿರ್ಮಾಣದ ಕುರಿತು ಸ್ಥಳೀಯರಿಗಿದ್ದ ಗೊಂದಲಗಳನ್ನು ಬಗೆ ಹರಿಸಲಾಗಿದೆ. 6.50 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚಿನ ಅನುದಾನಕ್ಕಾಗಿ ಸ್ಥಳೀಯ ಶಾಸಕರಾದ ಡಿ. ರವಿಶಂಕರ್ ಅವರು ಈ ಹಿಂದೆಯೇ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಹೆಚ್ಚುವರಿ ಅನುದಾನದ ಅಗತ್ಯವಿದ್ದರೆ ಖಂಡಿತವಾಗಿಯೂ ಅನುದಾನ ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದಾಗಿ ಹೇಳಿದರು.
ಗುತ್ತಿಗೆದಾರರ ಜೊತೆಗೂ ಈ ವಿಷಯವಾಗಿ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ ಎಂದು ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟರು. ನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಬದಲಾಯಿಸುವಂತೆ ಸ್ಥಳೀಯರು ಇಟ್ಟ ಬೇಡಿಕೆಗೆ ಅವರು ಸ್ಪಂದಿಸಿದದರು.
ಈ ಹಿಂದೆ ಕೆ.ಆರ್.ನಗರಕ್ಕೆ ಭೇಟಿ ನೀಡಿದ್ದಾಗಲೇ ಪ್ರತಿಮೆ ಬದಲಾವಣೆ ಬಗ್ಗೆ ಸೂಚಿಸಿದ್ದೆ. ಅದರಂತೆ ಈಗಾಗಲೇ ಶಾಸಕರು ಆದೇಶವನ್ನು ಹೊರಡಿಸಿದ್ದಾರೆ. ಸ್ಥಳವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳಿಗೂ ಸೂಚನೆಯನ್ನು ನೀಡಿದ್ದೇನೆ. ಮುಂದಿನ ಮೂರು ತಿಂಗಳುಗಳ ಒಳಗಾಗಿ ಹೊಸದಾಗಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ರೈತರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧ ಕ್ರಮ
ಜಿ ಪರಮೇಶ್ವರ ಅವರು ಇಂದು ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರ ಕೊಪ್ಪಲು ಗ್ರಾಮದಲ್ಲಿ ಮಳೆ ಕೊರತೆಯಿಂದ ಹಾನಿಗೊಳಗಾದ ರೈತರ ಜಮೀನಿಗೆ ತೆರಳಿ ಬರ ವೀಕ್ಷಣೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಬರ ಘೋಷಣೆಗಿರುವ ನಿಯಮ ಸಡಿಲಿಸುವಂತೆ ಕೇಂದ್ರಕ್ಕೆ ಪತ್ರ ಬರೆದರೂ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದರು. ರೈತರಿಗೆ ಮೈಕ್ರೋ ಫೈನಾನ್ಸ್‌ನವರು ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರ ಕೊಪ್ಪಲು ಗ್ರಾಮದಲ್ಲಿ ರಾಗಿ ಮತ್ತು ಹೊಗೆಸೊಪ್ಪು ಬೆಳೆದ ರೈತರ ಜಮೀನುಗಳಿಗೆ ಸ್ಥಳೀಯ ಶಾಸಕರಾದ ರವಿಶಂಕರ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಬಿತ್ತನೆಯಾಗಿ ಮೊಳಕೆಯೊಡೆದ ಕೆಲವೇ ದಿನಕ್ಕೆ ಮಳೆ ಕೊರತೆ ಎದುರಾದ ಕಾರಣ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇಡೀ ತಾಲ್ಲೂಕಿನಲ್ಲಿ ಈ ಬಾರಿ ಕೇವಲ 10 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸದ್ಯ ಆ ಬೆಳೆ ಕೂಡ ನಾಶವಾಗಿದೆ.
ವಸ್ತುಸ್ಥಿತಿಯನ್ನು ಗಮನಿಸಿದಾಗ ಇಡೀ ತಾಲ್ಲೂಕಿನಲ್ಲಿ ಬೆಳೆಹಾನಿ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಕೆ.ಆರ್ ನಗರ ತಾಲ್ಲೂಕನ್ನು ಈಗಾಗಲೇ ಬರಗಾಲಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ಜ್ಞಾಪನಾ ಪತ್ರ
ಮುಂದುವರೆದು, ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು. ಸೂಕ್ತ ಪರಿಹಾರವನ್ನು ನೀಡಲಾಗುವುದು. ಮುಖ್ಯಮಂತ್ರಿಗಳು ಇಂದು ಗದಗ ಜಿಲ್ಲೆಗೆ ಬರಪೀಡಿತ ಪ್ರದೇಶದ ವೀಕ್ಷಣೆಗೆ ತೆರಳಿದ್ದಾರೆ. ನಾನು ಇಂದು ಮತ್ತು ನಾಳೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಬರ ವೀಕ್ಷಣೆ ಮಾಡುತ್ತೇನೆ. ಅಂತಿಮವಾಗಿ ನಮ್ಮ ಸರ್ಕಾರ ಚರ್ಚಿಸಿ ರೈತರ ಸಮಸ್ಯೆ ಪರಿಹಾರಕ್ಕೆ ತೀರ್ಮಾನ ತೆಗೆದುಕೊಳ್ಳುತ್ತದೆ. ಕೆ.ಆರ್.ನಗರ ತಾಲೂಕಿನಲ್ಲಿ ಹೊಗೆಸೊಪ್ಪು, ರಾಗಿ ಹೆಚ್ಚು ಬೆಳೆಯುತ್ತಾರೆ. ಆದರೆ ಎಲ್ಲಾ ಬೆಳೆಗಳು ನಷ್ಟವಾಗಿದೆ. ರೈತರಿಗೆ ಯಾವ ಬೆಳೆಯೂ ಸಿಕ್ಕಿಲ್ಲ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.


Click it and Unblock the Notifications
