ಹೊಸ ವರ್ಷಕ್ಕೆ ವಿದ್ಯುತ್ ದರ ಏರಿಕೆಯ ಕೊಡುಗೆ?
ಬೆಂಗಳೂರು, ಡಿಸೆಂಬರ್. 10 : ಕರ್ನಾಟಕದ ಜನರಿಗೆ ಹೊಸ ವರ್ಷದಲ್ಲಿ ವಿದ್ಯುತ್ ದರ ಏರಿಕೆಯ ಉಡುಗೊರೆ ಸಿಗಲಿದೆ. ವಿದ್ಯುತ್ ದರ ಏರಿಕೆಗೆ ಅನುಮತಿ ನೀಡುವಂತೆ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ.
ಪ್ರತಿ ಯೂನಿಟ್‌ಗೆ 1 ರೂ. ದರ ಏರಿಕೆ ಮಾಡಲು ಅನುಮತಿ ನೀಡಬೇಕು ಎಂದು ಕೋರಿ ಐದು ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ. ಕಲಬುರಗಿ ವಿದ್ಯುತ್ ಸರಬರಾಬು ಕಂಪನಿ (ಜೆಸ್ಕಾಂ) 1.46 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ ಬಳಿಕ ದರ ಏರಿಕೆಗೆ ಅನುಮತಿ ನೀಡಲಿದೆ. ಆದರೆ, ವಿಧಾನಸಭೆ ಚುನಾವಣೆ ಎದುರಾಗುತ್ತಿರುವುದರಿಂದ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.
ಹಿಂದೆ ವಿದ್ಯುತ್ ದರ ಹೆಚ್ಚಳ ಮಾಡಿದಾಗ ನಗರದ ಬಳಕೆದಾರರಿಗೆ 30 ಯೂನಿಟ್‌ಗೆ 30 ಪೈಸೆ, 31ರಿಂದ 100 ಯೂನಿಟ್‌ಗೆ 40 ಪೈಸೆ, 100 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ 50 ಪೈಸೆ ಏರಿಕೆ ಮಾಡಲಾಗಿತ್ತು.
ಈಗ ಬೆಸ್ಕಾಂ (ಬೆಂಗಳೂರು ವಿಭಾಗ), ಚೆಸ್ಕಾಂ (ಮೈಸೂರು ವಿಭಾಗ), ಮೆಸ್ಕಾಂ (ಮಂಗಳೂರು ವಿಭಾಗ), ಹೆಸ್ಕಾಂ (ಹುಬ್ಬಳ್ಳಿ ವಿಭಾಗ) ಮತ್ತು ಜೆಸ್ಕಾಂ (ಕಲಬುರಗಿ ವಿಭಾಗ) ಪ್ರತಿ ಯೂನಿಟ್‌ಗೆ 1 ರೂ. ದರ ಏರಿಕೆ ಮಾಡಲಲು ಅನುಮತಿ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿವೆ.












Click it and Unblock the Notifications